

ಮಂಗಳೂರು: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಏಕಪಕ್ಷೀಯ ತನಿಖೆ ನಡೆಸಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಆದ್ದರಿಂದ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಶೇ.40 ಕಮಿಷನ್ ಬಗ್ಗೆ ಆರೋಪ ಮಾಡಿದ್ದರು. ಕೇವಲ ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಸಂತೋಷ್‌ನ ಪತ್ನಿ ಈ ಹಿಂದೆಯೇ ಹೇಳಿದ್ದರು. ಈಶ್ವರಪ್ಪ ಅವರನ್ನು ಒಮ್ಮೆಯೂ ತನಿಖೆಗೆ ಒಳಪಡಿಸದೇ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಮೃತನ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಹುಸಿಯಾಗಿದೆ. ಈಶ್ವರಪ್ಪ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಒತ್ತಾಯಿಸಿದ್ದಾರೆ ಎಂದು ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಮಾಜಿ ಸಚಿವ ಕೆ.ಜೆ.ಜಾರ್ಜ್ ರಾಜಿನಾಮೆ ಮತ್ತು ಈಶ್ವರಪ್ಪ ಪ್ರಕರಣಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಜಾರ್ಜ್ ಕೇಸನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಿತ್ತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಇನ್‌ಸ್ಪೆಕ್ಟರ್ ಗಣಪತಿ ಆತ್ಮಹತ್ಯೆ ಕೇಸಿನಲ್ಲಿ ಜಾರ್ಜ್‌ಗೆ ಕ್ಲೀನ್‌ಚಿಟ್ ನೀಡಿದ್ದು ಪ್ರಧಾನಿ ಮೋದಿಯ ಸಿಬಿಐ. ಈಶ್ವರಪ್ಪ ಅವರು ಬ್ರಹ್ಮಾಂಡ ಭ್ರಷ್ಟಾಚಾರಿಯಾಗಿದ್ದು, ಅವರ ವಿರುದ್ಧ ಇಡಿ ತನಿಖೆ ನಡೆಸಬೇಕು. ಆದರೆ ಬಿಜೆಪಿ ಸರ್ಕಾರ ಕೇವಲ ಸೋನಿಯಾ ಮತ್ತಿತರರ ವಿರುದ್ಧ ಇಡಿ ತನಿಖೆ ನಡೆಸುತ್ತಿಯೇ ವಿನಃ ಈಶ್ವರಪ್ಪನಂತಹವರ ಮೇಲೆ ತನಿಖೆ ನಡೆಸುತ್ತಿಲ್ಲ. ಈಶ್ವರಪ್ಪಗೆ ಮತ್ತೆ ಸಚಿವ ಸ್ಥಾನ ನೀಡಿದರೆ, ಮತ್ತಷ್ಟು ಹೊಲಸು ಆಗಲಿದೆ. ಸರ್ಕಾರದ ಮಾನ ಉಳಿಸಲು ಈಶ್ವರಪ್ಪಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ದ.ಕ.ದಲ್ಲಿ ಬಿಜೆಪಿ ಕೊಲೆಗಡುಕರ ಪಕ್ಷ ಎನಿಸಿದೆ. ಇತ್ತೀಚೆಗೆ ಸುಳ್ಯದ ಕಳಂಜದಲ್ಲಿ ಮಸೂದ್ ಎಂಬ ಅಮಾಯಕರ ಕೊಲೆಯನ್ನು ಬಿಜೆಪಿಗರು ನಡೆಸಿದ್ದಾರೆ. ಇಂತಹ ಅನೇಕ ಹತ್ಯೆಗಳು ಜಿಲ್ಲೆಯಲ್ಲಿ ನಡೆದಿದೆ. ಆದರೆ ಈವರೆಗೆ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಕಾರ್ಯಕರ್ತನ ವಿರುದ್ಧ ಇಂತಹ ಕೊಲೆ ಕೇಸ್‌ಗಳಿಲ್ಲ ಎಂದು ಆವರು ಹೇಳಿದರು.
ಮುಖಂಡರಾದ ಶಶಿಧರ ಹೆಗ್ಡೆ, ಸುರೇದ್ರ ಕಂಬಳಿ, ಪ್ರಕಾಶ್ ಸಾಲಿಯಾನ್, ಅಬ್ದುಲ್ ರವೂಫ್, ಅಪ್ಪಿ, ಸಾಹುಲ್ ಹಮೀದ್, ನೀರಜ್‌ಚಂದ್ರ ಪಾಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.