ರಾಹುಲ್ ಗಾಂಧಿ ಯಾತ್ರೆಗಳಿಂದ ಪಕ್ಷಕ್ಕೆ ಶಕ್ತಿ

ex minister vinaykumar sorake
Published on

ಶಿವಮೊಗ್ಗ: ಎಐಸಿಸಿ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಸಿದ್ದ ಪಾದಯಾತ್ರೆ ಹಾಗೂ ಬಿಹಾರದಲ್ಲಿ ಇತ್ತೀಚೆಗೆ ನಡೆಸಿದ ಮತಗಳ್ಳತನ ವಿರುದ್ಧದ ಯಾತ್ರೆಗಳಿಂದ ಪಕ್ಷಕ್ಕೆ ಶಕ್ತಿ ಬಂದಿದೆ ಎಂದು ವಿನಯ್‌ಕುಮಾರ್ ಸೊರಕೆ ಹೇಳಿದರು.

ಮತಗಳ್ಳತನ ಕೇವಲ ಕರ್ನಾಟಕ, ಬಿಹಾರ ಅಥವಾ ಮಹಾರಾಷ್ಟ್ರಕ್ಕೆ ಮಾತ್ರ ಸಿಮೀತವಾಗಿಲ್ಲ, ಇಡೀ ದೇಶಕ್ಕೆ ವ್ಯಾಪಿಸಿದೆ. ಮಹಾರಾಷ್ಟ್ರ ದಲ್ಲಿ ವಿಧಾನಸಭೆ ಚುನಾವಣೆ ವೇಳೆ 1 ಲಕ್ಷದಷ್ಟು ಹೆಚ್ಚುವರಿ ಇದ್ದ ವೋಟರ್ ಸಂಖ್ಯೆ ಪಾರ್ಲಿಮೆಂಟ್ ಚುನಾವಣೆ ವೇಳೆ ದುಪ್ಪಟ್ಟಾಗುತ್ತದೆ. ಆದ್ದರಿಂದಲೇ ಮತಗಳ್ಳತನದ ಬಗ್ಗೆ ದೊಡ್ಡ ಅನುಮಾನ ಮೂಡಿದೆ. ಇದರ ಬಗ್ಗೆಯೇ ರಾಜ್ಯದ ಜನರ ಗಮನ ಸೆಳೆಯಲು ಕೆಪಿಸಿಸಿ ಪ್ರಚಾರ ಸಮಿತಿ ಪ್ರವಾಸ ಹಮ್ಮಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಐಟಿ ಮೇಲೆ ಪ್ರಭಾವ ಬೀರಲ್ಲ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನಡೆಸುತ್ತಿರುವ ಎಸ್‌ಐಟಿ ತನಿಖೆ ಮೇಲೆ ಯಾರೂ ಪ್ರಭಾವವೂ ಬೀರುವುದಿಲ್ಲ. ತನಿಖೆ ವಿಷಯದಲ್ಲಿ ಎಸ್‌ಐಟಿ ವರದಿ ಬರುವ ಮುಂಚೆಯೇ ಷಡ್ಯಂತ್ರ ನಡೆದಿದೆ ಎಂದು ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ಆದರೆ ವರದಿ ಬರುವ ಮುಂಚೆಯೇ ಬಿಜೆಪಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನೆಯನ್ನು ಬಳಸಿದರಷ್ಟೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆಯಿಂದ ತನಿಖೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net