ಕಳ್ಳ ಸರ್ಕಾರ ರಚನೆಗೆ ಅವಕಾಶ ಸಿಗದಿರಲಿ

Screenshot_2023-05-06-19-48-06-56.jpg
Published on

ಬೆಳಗಾವಿ: ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲೇಬೇಕು. ಇಲ್ಲದಿದ್ದರೆ ಬಿಜೆಪಿ ಅವರು ನಮ್ಮ ಶಾಸಕರನ್ನು ಕದ್ದು ಮತ್ತೆ ಕಳ್ಳ ಸರ್ಕಾರ ರಚಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.
 ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಶನಿವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಕಳ್ಳತನದ ಸರ್ಕಾರ. ಮೂರು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ಕರ್ನಾಟಕ ಸರ್ಕಾರ ಭಾರತ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದರು.
 ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿ ಅವರಿಗೆ ಬರೆದ ಪತ್ರದಲ್ಲಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೂ ಈ ಬಗ್ಗೆ ಪ್ರಧಾನಿ ಮೋದಿ ಈವರೆಗೂ ಚಕಾರ ಎತ್ತಲಿಲ್ಲ. ರಾಜ್ಯದಲ್ಲಿ ಪಿಎಸ್‌ಐ, ಸಹಾಯಕ ಉಪನ್ಯಾಸಕ, ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ ಸೇರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಇವತ್ತು ಕರ್ನಾಟಕ ರಾಜ್ಯಕ್ಕೆ ಪ್ರಚಾರಕ್ಕೆ ಬಂದು ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಒಂದು ಪದ ಮಾತನಾಡುತ್ತಿಲ್ಲ. ಇಲ್ಲಿಗೆ ಬಂದು ಯಾವುದೋ ಒಂದು ನೆಪ ಹೇಳಿ ದೆಹಲಿಗೆ ಹೋಗುತ್ತಾರೆ ಎಂದರು.
 10 ಲಕ್ಷ ಮಂದಿಗೆ ಉದ್ಯೋಗ
 ಮೂರು ವರ್ಷದಲ್ಲಿ ಬಿಜೆಪಿಯವರು ರಾಜ್ಯದ ಜನರಿಗೆ 40 ಪರ್ಸೆಂಟ್ ಎಂಬುದನ್ನು ಬಾಯಿಪಾಠ ಮಾಡಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 40 ಸೀಟ್ ಮಾತ್ರ ಗೆಲ್ಲಿಸಬೇಕು ಎಂದರು. ನೋಟ್‌ಬ್ಯಾನ್, ಜಿಎಸ್‌ಟಿಯಿಂದ ಬಹಳಷ್ಟು ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ. ಐದು ವರ್ಷದಲ್ಲಿ 10 ಲಕ್ಷ ಮಂದಿಗೆ ನೌಕರಿ ಕೊಡುತ್ತೇವೆ. 15 ಲಕ್ಷ ಕೋಟಿ ರೂ. ರೈತರಿಗೆ ಮೀಸಲಿಡುತ್ತೇವೆ. ಹಾಲಿನ ಪ್ರೋತ್ಸಾಹಧನ 5 ರೂ. 7 ರೂ. ಹೆಚ್ಚಿಸುತ್ತೇವೆ ಎಂದರು.
 ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸ್ವಾಗತಿಸಿದರು. ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ (ರಾಜು) ಸೇಠ್, ಮಾಜಿ ಸಚಿವ ವೀರಕುಮಾರ ಪಾಟೀಲ, ಶಾಮ್ ಘಾಟಗೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಚಿಕ್ಕೋಡಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net