ಜೀನ್ಸ್ ಪಾರ್ಕ್ ಶಂಕುಸ್ಥಾಪನೆಗೆ ರಾಹುಲ್‌ಗಾಂಧಿ ಆಗಮನ

Published on

ಬಳ್ಳಾರಿ : ತಾಲೂಕಿನ ಸಂಜೀವರಾಯನ ಕೋಟೆ ಬಳಿ ರಾಜ್ಯ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ‘ ಜೀನ್ಸ್ ಅಪೆರಲ್ ಪಾರ್ಕ್’ ಶಂಕು ಸ್ಥಾಪನೆಯ ಕಾರ್ಯಕ್ರಮವನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಮೂಲಕ ನೆರವೇರಿಸಲು ಚಿಂತನೆ ನಡೆಸಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಮೂಲಕ ಗ್ರಾಮದಲ್ಲಿ ಎಕರೆಗೆ 40 ಲಕ್ಷ ರೂ. ದಂತೆ 154 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸದ್ಯ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ 500ಕ್ಕೂ ಹೆಚ್ಚು ಘಟಕಗಳಿಗೆ ನೆಲೆ ಒದಗಿಸಲು ಕೆಐಎಡಿಬಿ ಯೋಜನೆ ರೂಪಿಸಿದೆ. ಅಲ್ಲದೆ, ಜೀನ್ಸ್ ಉದ್ಯಮದಲ್ಲಿ ಸ್ಟಿಚ್ಚಿಂಗ್, ವಾಷಿಂಗ್ ಹಾಗೂ ಮಾರಾಟ ಸೇರಿ ಹಲವು ಹಂತಗಳಿವೆ. ಇವುಗಳನ್ನೆಲ್ಲ ಒಂದೇ ಸೂರಿನಡಿ ತರುವ ಉದ್ದೇಶವಿದೆ. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ಹಾಗೂ ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಪ್ರಸ್ತಾವ ಕೆಐಎಡಿಬಿ ಮುಂದಿದೆ.

ಅಲ್ಲದೆ, ಈಚೆಗೆ ಜಿಲ್ಲಾಡಳಿತದಿಂದ ಗಾರ್ಮೆಂಟ್ಸ್ ಉದ್ದಿಮೆದಾರರೊಂದಿಗೆ ಸಭೆ ಆಯೋಜಿಸಿಲಾಗಿತ್ತು. ಆರವತ್ತು ಅಧಿಕ ಗಾರ್ಮೆಂಟ್ಸ್ ಉದ್ದಿಮೆದಾರರು ಈ ಜೀನ್ಸ್ ಘಟಕಗಳನ್ನು ತೆರೆಯಲು ಉತ್ಸುಕರಾಗಿದ್ದಾರೆ. ಜೀನ್ಸ್ ಹಾಗೂ ವಾಷಿಂಗ್ ಘಟಕಗಳ ಸ್ಥಾಪನೆಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಾರ್ಖಾನೆ ಸ್ಥಾಪನೆಗೆ ಒಂದು ಎಕರೆ, ಜೀನ್ಸ್ ಹಾಗೂ ವಾಷಿಂಗ್ ಘಟಕಗಳು ತೆರೆಯಲು ಅರ್ಧ ಎಕರೆ ಹಾಗೂ ಮಳಿಗೆಗಳಿಗೆ ಇಂತಿಷ್ಟು ಸ್ಥಳ ನೀಡುವುದಾಗಿ ಜಿಲ್ಲಾಡಳಿತದಿಂದ ಭರವಸೆ ನೀಡಿದೆ. ಆದರೆ, ಈವರೆಗೆ ಸ್ಥಳಕ್ಕೆ ಎಷ್ಟು ಹಣ ಎಂಬುದಾಗಿ ನಿಗದಿಗೊಳಿಸಿಲ್ಲ. ಜಿಲ್ಲಾಡಳಿತವೂ ಉದ್ದಿಮೆದಾರರ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಜತೆ ಚರ್ಚಿಸಿ ಒಂದು ನಿವೇಶನಕ್ಕೆ ಇಂತಿಷ್ಟು ಹಣ ಎಂಬುದು ನಿಗದಿ ಮಾಡಿ ಮುಂದಿನ ಸಭೆಯಲ್ಲಿ ತಿಳಿಸಲಿದೆ ಎಂದು ಕೆಐಎಡಿಬಿ ಅಧಿಕಾರಿ ತಿಳಿಸಿದರು.

ರಾಹುಲ್ ಗಾಂಧಿ ಭರವಸೆ : ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ವೇಳೆ ಕೈಗೊಂಡಿದ್ದ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಆರಂಭಿಸಲಾಗುವುದು. ಜಗತ್ತಿನಲ್ಲಿ ಬಳಕೆಯಾಗುವ ಜೀನ್ಸ್ ಮೇಲೆ ‘ ಮೇಡ್ ಇನ್ ಬಳ್ಳಾರಿ ’ ಮಾಡುವೆ ಎಂದು ಆಶ್ವಾಸನೆಯ ಮಾತುಗಳು ಆಡಿದರು. ಅಲ್ಲದೆ, ವಿಧಾನಸಭಾ ಚುನಾವಣೆಯಲ್ಲಿ ನಗರ ಹಾಗೂ ಗ್ರಾಮೀಣ ಕ್ಷೇತ್ರದ ಪ್ರಚಾರದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜೀನ್ಸ್ ಅಪೆರೆಲ್ ಪಾರ್ಕ್ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಜೀನ್ಸ್ ಪಾರ್ಕ್ ಬಗ್ಗೆ ವಿರೋಧ ಪಕ್ಷಗಳ ಟೀಕೆಗೆ 2024ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಜೀನ್ಸ್ ಪಾರ್ಕ್ ನಿರ್ಮಿಸುವೆ ಎಂಬುದಾಗಿ ಪ್ರತ್ಯುತ್ತರ ನೀಡಿದ್ದರು. ಸದ್ಯ, ಭರವಸೆಯಂತೆ ಜಿಲ್ಲೆಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣ ಕೊಂಚ ವೇಗ ಪಡೆದುಕೊಂಡಿದೆ. ಶಂಕುಸ್ಥಾಪನೆ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಅವರ ಮೂಲಕ ನೆರವೇರಿಸಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಸರ್ಕಾರ ಪಣ ತೊಟ್ಟಂತೆ ಇದೆ. ರಾಹುಲ್ ಗಾಂಧಿ ಅವರ ಜತೆ ಸಿಎಂ, ಡಿಸಿಎಂ ಹಾಗೂ ಕೈಗಾರಿಕೆ ಸಚಿವ ಚರ್ಚಿಸಿ ದಿನಾಂಕ ನಿಗದಿ ಮಾಡಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿದವು.

ಕೋಟ್... ಕಾಂಗ್ರೆಸ್ ಸರ್ಕಾರದ ಕೊಟ್ಟ ಆಶ್ವಾಸನೆಯಂತೆ ಜಿಲ್ಲೆಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣದ ವೇಗ ಪಡೆದುಕೊಂಡಿದೆ. ನೂರಕ್ಕೆ ನೂರು ರಾಹುಲ್ ಗಾಂಧಿ ಅವರು ಜೀನ್ಸ್ ಅಪರೆಲ್ ಪಾರ್ಕ್ ಶಂಕುಸ್ಥಾಪನೆಗೆ ಆಗಮಿಸಲಿದ್ದಾರೆ. ಶಂಕುಸ್ಥಾಪನೆಯ ಕಾರ್ಯಕ್ರಮ ದಿನಾಂಕ ಇನ್ನೂ ನಿಗದಿಯಾಗಿಲ್ಲ.

- ನಾರಾ ಭರತರೆಡ್ಡಿ, ಶಾಸಕ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net