ಹುಬ್ಬಳ್ಳಿಗೆ ಆಗಮಿಸಿದ ರಾಹುಲ್​; ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಭಾಗಿ..

Rahul
Published on

ಹುಬ್ಬಳ್ಳಿ: ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿರುವ ಹುಬ್ಬಳ್ಳಿಗೆ ಎಐಸಿಸಿ ವರಿಷ್ಠ ರಾಹುಲ್​ ಗಾಂಧಿ ಕೆಲವು ನಿಮಿಷಗಳ ಹಿಂದೆ ಆಗಮಿಸಿದ್ದು, ಸಭೆ ನಡೆಯಲಿರುವ ಖಾಸಗಿ ಹೋಟೆಲ್​ಗೆ ಕೆಪಿಸಿಸಿ ನಾಯಕರೊಂದಿಗೆ ಪ್ರವೇಶ ಮಾಡಿದ್ದಾರೆ.

ವಿಮಾನ ನಿಲ್ದಾಣದಿಂದ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಕೊಂಡು ಹೋಟೆಲ್​ಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚೂಕಡಿಮೆ ಒಂದೂವರೆ ಗಂಟೆ ತಡವಾಗಿ ರಾಹುಲ್ ಗಾಂಧಿ ಆಗಮಿಸಿದ್ದರಿಂದ ರಾತ್ರಿ 8 ಗಂಟೆಗೆ ನಡೆಯಬೇಕಿದ್ದ ಸಭೆ ಇನ್ನೇನು ಆರಂಭಗೊಳ್ಳಲಿದೆ.

ಗೋಕುಲ ರಸ್ತೆಯ ಫಾರ್ಚೂನ್​ ಹೋಟೆಲ್​​ನಲ್ಲಿ ಸಭೆ ನಡೆಯಲಿದ್ದು, ಹೋಟೆಲ್​ಗೆ ಕಾಂಗ್ರೆಸ್ ನಾಯಕರು ಪ್ರವೇಶಿಸಲು ಮುಂದಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಆದರೆ ಪಾಸ್ ಇದ್ದವರನ್ನು ಮಾತ್ರ ಬಿಡುತ್ತಿದ್ದು, ತಮ್ಮನ್ನೂ ಒಳ ಬಿಡುವಂತೆ ಕೆಲ ನಾಯಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದೂ ಕಂಡುಬಂತು. ಇನ್ನು ಮುಂಚಿತವಾಗಿ ರೂಮ್ ಬುಕ್ ಮಾಡಿರುವ ಗ್ರಾಹಕರು ಕೂಡ ಈ ವೇಳೆ ಪರದಾಡುವಂತಾಗಿತ್ತು. ಹೋಟೆಲ್​ನಲ್ಲಿ ತಮಗೆ ಪ್ರೆಸಿಡೆನ್ಷಿಯಲ್​ ಸೂಟ್​ ಬೇಡ ಎಂದು ಹೇಳಿರುವ ರಾಹುಲ್ ಗಾಂಧಿ, ಸಾಮಾನ್ಯ ರೂಮ್​ ಬುಕ್ ಮಾಡುವಂತೆ ಸೂಚಿಸಿದರು.

ರಾಹುಲ್​ ಗಾಂಧಿ, ವೇಣುಗೋಪಾಲ್ ಮತ್ತು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಮುಂದಿನ ಚುನಾವಣಾ ತಂತ್ರಗಳ ಕುರಿತು ಪ್ರಮುಖವಾಗಿ ಚರ್ಚೆ ಆಗಲಿದೆ ಎನ್ನಲಾಗಿದೆ. ಸಭೆ ಆರಂಭವೇ ತಡವಾಗಿರುವುದರಿಂದ, ಸಭೆಯ ಚರ್ಚೆಯ ವಿವರಗಳು ಮಧ್ಯರಾತ್ರಿಯ ಸುಮಾರಿಗೆ ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net