ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ; 80 ವರ್ಷದ ತಾಯಿಗಾಗಿ ಬದುಕಲು ಬಿಡಿ

r.uchil
Published on
  • ವಿಜಯವಾಣಿ ಸುದ್ದಿಜಾಲ ಮಂಗಳೂರು
  • ರಾಷ್ಟ್ರೀಯತೆ, ಸೈದ್ಧಾಂತಿಕ ನಿಲುವು ಸಂಬಂಧಿಸಿ ಯಾರಿಗಾದರೂ ನನ್ನಿಂದ ನೋವಾಗಿದ್ದರೆ ಕ್ಷಮಿಸಿಬಿಡಿ. ತನ್ನ 80 ವರ್ಷದ ತಾಯಿಗಾಗಿ ನನ್ನನ್ನು ಬದುಕಲು ಬಿಡಿ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ತಮ್ಮ ವಿರೋಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
  • ನಗರದ ಪತ್ರಿಕಾ ಭವನದಲ್ಲಿ ಸೋಮವಾರ ತಾಯಿ ಆಸಿಯಮ್ಮ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಸರ್ಕಾರ ಒದಗಿಸಿದ್ದ ಪೊಲೀಸ್ ಇಲಾಖೆಯ ಗನ್‌ಮ್ಯಾನ್ ಭದ್ರತೆಯನ್ನು ಚುನಾವಣೆ ಘೋಷಣೆ ಮೊದಲು ಹಿಂಪಡೆಯಲಾಗಿದೆ ಎಂದು ತಿಳಿಸಿದರು.
  • ನನ್ನ ಮೇಲೆ ತಿವ್ರ ಸ್ವರೂಪದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ತೀರ್ಪು ಬಂದಿಲ್ಲ. ಕೊಲೆಗೆ ಪ್ರಯತ್ನಿಸಿದ ಆರೋಪಿಗಳು ಈ ನಡುವೆ ನನ್ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಮೊಕದ್ದಮೆ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದರ ನಡುವೆ ಗನ್‌ಮ್ಯಾನ್ ಹಿಂಪಡೆದಿರುವುದು ಅಚ್ಚರಿ ತಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
  • ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ 2012, ಮಾರ್ಚ್ 15 ರಂದು ಸಂಘಟನೆಯೊಂದಕ್ಕೆ ಸೇರಿದ ಏಳು ಮಂದಿಯ ತಂಡ ನೇರವಾಗಿ ಕಚೇರಿಗೆ ನುಗ್ಗಿ ಯದ್ವಾತದ್ವಾ ಕೊಚ್ಚಿ ಹಾಕಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿತ್ತು. ರಾಜಕೀಯ ಸಿದ್ಧಾಂತ ಹಾಗೂ ಸಂಘದ ಜತೆ ಗುರುತಿಸಿದ ಕಾರಣಕ್ಕಾಗಿ ಈ ಕೊಲೆಯತ್ನ ನಡೆಸಲಾಯಿತು ಎಂದು ಆರೋಪಿಗಳು ನೀಡಿದ ಹೇಳಿಕೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಆರೋಪ ಸಾಬೀತಾಗಿ, ಆರೋಪಿಗಳಿಗೆ ನಾಲ್ಕುವರೆ ವರ್ಷ ಸಜೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಅವರು ವಿವರಿಸಿದರು.
  • ಇತ್ತೀಚೆಗೆ ನನ್ನ ಗನ್‌ಮ್ಯಾನ್ ಅವರ ಬಾವ ತೀರಿಕೊಂಡ ಸಂದರ್ಭ ಇಲಾಖೆಯ ಅನುಮತಿ ಪಡೆಯದೆ, ಕೇವಲ ನನ್ನ ಒಪ್ಪಿಗೆ ಪಡೆದು ಗನ್‌ಮ್ಯಾನ್‌ಒಂದು ಗಂಟೆ ರಜೆ ಪಡೆದಿದ್ದರು. ಈ ಸಂದರ್ಭ ಮಂಗಳೂರು ಪತ್ರಿಕಾಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ನನ್ನನ್ನು ಶಸ್ತ್ರಸಜ್ಜಿತ ಏಳು ಮಂದಿಯ ತಂಡವೊಂದು ಹಿಂಬಾಲಿಸಿತ್ತು. ಆ ಸಂದರ್ಭ ಮಿತ್ರರೋರ್ವರ ಸ್ಕೂಟರ್ ಏರಿ ಪೊಲೀಸ್ ಆಯುಕ್ತರ ಕಚೇರಿಗೆ ಓಡಿ ಅನಾಹುತದಿಂದ ಪಾರಾಗಿದ್ದೆ. ಈ ಸಂದರ್ಭ ನನ್ನ ಮೇಲೆ ಆಕ್ರಮಣ ನಡೆಸಲು ಆಗಮಿಸಿದ್ದ ಆರೋಪಿಗಳ ಚಿತ್ರಗಳು ಪತ್ರಿಕಾ ಭವನದ ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಘಟನೆ ಸಮದರ್ಭ ಪತ್ರಿಕಾ ಭವನದಲ್ಲಿ ಇದ್ದ ಪತ್ರಕರ್ತರು ಕೂಡ ಸಾಕ್ಷೃ ನುಡಿದು ಸಹಾಯ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಎಫ್‌ಐಆರ್ ಹಾಕಿದ ಪೊಲೀಸರು ಇಲ್ಲಿಯ ತನಕ ಓರ್ವರನ್ನು ಕೂಡ ಬಂದಿಸಿಲ್ಲ ಎಂದು ಆರೋಪಿಸಿದರು.
  • ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದೂ ನಡೆದುಕೊಂಡಿಲ್ಲ. ನನ್ನ ಸಮುದಾಯ ಅಥವಾ ಧರ್ಮದ ವಿರುದ್ಧ ಯಾರ ಮನ ನೋಯಿಸುವ ಕೆಲಸವನ್ನು ಕೂಡ ಮಾಡಿಲ್ಲ. ಹೀಗಿದ್ದರೂ ನನ್ನ ಹಳೆಯ ಭಾಷಣದ ತುಣುಕುಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ವೈರಲ್ ಮಾಡಿ ನನ್ನ ಬಗ್ಗೆ ಸಮಾಜದಲ್ಲಿ ವಿಷ ಬಿತ್ತುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net