

ಮೈಸೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರು ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಶಂಕುಸ್ಥಾಪನೆ, ಮುಖ್ಯಮಂತ್ರಿ ನಗರೋತ್ಥಾನ 4ರಡಿ ಆಯ್ದ ಫಲಾನುಭವಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವುಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಇಂದಿರಾ ಕ್ಯಾಂಟೀನ್ ಶುರು ಮಾಡಲಾಗಿದೆ. ಕೂಲಿಕಾರ್ಮಿಕರು, ಬಡವರು, ಕಟ್ಟಡ ಕಾರ್ಮಿಕರು, ಬಡವರು, ಶ್ರಮಜೀವಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ರಾಜ್ಯಾದ್ಯಂತ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. 2018ರಲ್ಲಿ ಈ ಯೋಜನೆ ಶುರುವಾಯಿತು. ಇದೀಗ ರಾಜ್ಯದಲ್ಲಿ 550ಕ್ಕಿಂತ ಹೆಚ್ಚು ಇಂದಿರಾ ಕ್ಯಾಟೀನ್‌ಗಳು ಬಡವರ ಹಸಿವು ನೀಗಿಸುತ್ತಿವೆ ಎಂದರು.
ಜಿಲ್ಲಾಧಿಕಾರಿ ಕಚೇರಿಗೆ ದೂರದ ಊರುಗಳಿಂದ ನಿತ್ಯ ನೂರಾರು ಜನರು ಬರುತ್ತಾರೆ. ಅವರಿಗೆ ಊಟದ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ಡಿಸಿ ಕಚೇರಿಯಲ್ಲೇ ಇಂದಿರಾ ಕ್ಯಾಟೀನ್ ತೆರೆಯಲಾಗುತ್ತಿದೆ ಎಂದರು.
ಬಡವರು ತಮ್ಮ ಬದುಕು, ಕುಟುಂಬದ ಹಿತ, ಆರೋಗ್ಯದ ಕಡೆಗೆ ಗಮನ ನೀಡಬೇಕು. ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳಬೇಕು. ಎಲ್ಲರೂ ಸಮಾನರಂತೆ ಬದುಕಬೇಕು. ಇದುವೇ ಸಂವಿಧಾನದ ಆಶಯ. ಆ ಪ್ರಕಾರವೇ ಸಿದ್ದರಾಮಯ್ಯ ಸರ್ಕಾರ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಉಚಿತವಾಗಿ ಅಕ್ಕಿ, ವಿದ್ಯುತ್, ಸಾರಿಗೆ ಬಸ್‌ಗಳ ಸೇವೆ, ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಜೀವನ ಮಟ್ಟವೂ ಸುಧಾರಣೆಯಾಗಿದೆ ಎಂದರು.
ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಸಂವಿಧಾನದ ಮೂಲ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 12 ಕ್ಯಾಂಟೀನ್ ಇವೆ. ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರಿನಲ್ಲಿ ತಲಾ ಒಂದು ಕ್ಯಾಂಟೀನ್ ತೆರೆಯಲಾಗಿದೆ. ಹೊಸದಾಗಿ 9 ಇಂದಿರಾ ಕ್ಯಾಟೀನ್‌ಗಳು ಆರಂಭಿಸಲಾಗುತ್ತಿದೆ. ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ 2 ಕ್ಯಾಟೀನ್‌ಗಳು ಅಂದಾಜು ವೆಚ್ಚ 35 ಲಕ್ಷ ರೂ.ವೆಚ್ಚದಲ್ಲಿ ಕಾರ್ಯಾರಂಭ ಮಾಡಲಿವೆ. ಕಡಕೊಳ, ರಮ್ಮನಹಳ್ಳಿ, ಪಿರಿಯಾಪಟ್ಟಣ, ಹೂಟಗಳ್ಳಿ, ಬೋಗಾದಿ, ಶ್ರೀರಾಂಪುರ, ಸರಗೂರಿನಲ್ಲಿ ಅಂದಾಜು 65 ಲಕ್ಷ ರೂ. ವೆಚ್ಚದಲ್ಲಿ ಕ್ಯಾಟೀನ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಕ್ಯಾಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು 3 ಪ್ಯಾಕೇಜ್‌ನಲ್ಲಿ ಟೆಂಡರ್ ಆಹ್ವಾನಿಸಿ ಸರಬರಾಜುದಾರನ್ನು ನೇಮಕ ಮಾಡಲಾಗಿದೆ. ಸರ್ಕಾರ ಮತ್ತು ಪಾಲಿಕೆ 50:50ರಷ್ಟು ಅನುದಾನ ನೀಡುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕ್ಯಾಟೀನ್‌ಗಳಿಗೆ ಪೂರ್ತಿ ಹಣವನ್ನು ಸರ್ಕಾರದಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉತ್ತಮ ಆಹಾರ ನೀಡಲು ಇಂದಿರಾ ಕ್ಯಾಂಟೀನ್‌ಗಳನ್ನು ಸರ್ಕಾರದ ವತಿಯಿಂದ ತೆರೆಯಲಾಗುತ್ತಿದೆ. ದುಡಿಯುವ ವರ್ಗಕ್ಕೆ ಹೊಟ್ಟೆ ತುಂಬ ಆಹಾರವನ್ನು ಕಡಿಮೆ ದರದಲ್ಲಿ ನೀಡುವುದು ಇದರ ಉದ್ದೇಶವಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುತ್ತಿರುವುದರಿಂದ ಸರ್ಕಾರಿ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ವಿವಿಧ ಫಲಾನುಭವಿಗಳಿಗೆ ಸಹಾಯಧನ ಸೌಲಭ್ಯವನ್ನು ವಿತರಿಸಲಾಯಿತು. ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಡಿ.ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ಇತರರಿದ್ದರು.