ಖಾಕಿ ಕಣ್ಗಾವಲಲ್ಲಿ ರಾಗಿಗುಡ್ಡ, ಇಬ್ಬರ ಬಂಧನ

raagi gudda Khaki surveillance
Published on

ಶಿವಮೊಗ್ಗ: ನಗರದ ಹೊರವಲಯದ ರಾಗಿಗುಡ್ಡದ ಬಂಗಾರಪ್ಪ ಕಾಲನಿಯಲ್ಲಿ ಶನಿವಾರ ರಾತ್ರಿ ಹೊತ್ತಿದ್ದ ಗಣೇಶನ ವಿಗ್ರಹ ಮತ್ತು ನಾಗರ ಕಲ್ಲು ಧ್ವಂಸದ ಕಿಚ್ಚನ್ನು ಜಿಲ್ಲಾ ಪೊಲೀಸರು ಒಂದೇ ರಾತ್ರಿಯಲ್ಲಿ ತಣ್ಣಗಾಗಿಸಿದ್ದಾರೆ. ಇಡೀ ರಾಗಿಗುಡ್ಡ ಖಾಕಿ ಪಡೆಯ ಕಣ್ಗಾವಲಿನಲ್ಲಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನೂ ವಿಗ್ರಹ ಧ್ವಂಸಗೊಳಿಸಿದ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಂತಿನಗರ ಸಮೀಪದ ಬಂಗಾರಪ್ಪ ಕಾಲನಿಯಲ್ಲಿ ಕಿಡಿಗೇಡಿಗಳಿಬ್ಬರು ಗಣೇಶ ಮೂರ್ತಿ ಹಾಗೂ ನಾಗರ ಕಲ್ಲಿನ ವಿಗ್ರಹಕ್ಕೆ ಕಾಲಿಂದ ಒದ್ದು, ಧ್ವಂಸಗೊಳಿಸಿದ್ದಾರೆಂಬ ಸುದ್ದಿ ಇಡೀ ನಗರದಲ್ಲಿ ಹಬ್ಬಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಮೂರ್ತಿಗಳನ್ನು ಯಥಾಸ್ಥಿತಿ ಪ್ರತಿಷ್ಠಾಪಿಸಿ ಸಂಭಾವ್ಯ ಗಲಭೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ ಒಳಗೊಂಡಂತೆ ಡಿವೈಎಸ್‌ಪಿ ಸೇರಿ ಕೆಲ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿ ಎ.ಜಿ.ಕಾರಿಯಪ್ಪ ಕೂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ತಡರಾತ್ರಿಯೇ ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ, ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸುವಂತೆ ಖಾಕಿ ಪಡೆಗೆ ತಾಕೀತು ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net