

ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ರಾಷ್ಟ್ರವಾದಿ. ಅವರೆಂದೂ ಪಕ್ಷಾಂತರ ಮಾಡಿದವರಲ್ಲ. ಈ ಬಾರಿ ರಾಷ್ಟ್ರಭಕ್ತರ ಬಳಗ ಅವರನ್ನು ಬೆಂಬಲಿಸಲಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ರಾಷ್ಟ್ರಭಕ್ತರ ಬಳಗದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ನನಗೆ ದೆಹಲಿ ನಾಯಕರು ಫೋನ್ ಮಾಡಿ ತಿಳಿಸಿದ್ದರು. ಆದರೆ ರಘುಪತಿ ಭಟ್ ಅವರಿಗೆ ಆ ಭಾಗ್ಯವೂ ಸಿಗಲಿಲ್ಲ. ಆದರೂ ಅವರು ಲೋಕಸಭೆ ಚುನಾವಣೆಯಲ್ಲಿ 40 ದಿನ ಶಿವಮೊಗ್ಗದಲ್ಲೇ ಇದ್ದು ಕಾರ್ಯನಿರ್ವಹಿಸಿದರು. ನನಗೆ ಮೋಸ ಮಾಡಿದಂತೆ ಈಗ ಭಟ್ಟರಿಗೂ ಮೋಸವಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಬಗ್ಗೆ ಸಾವಿರಾರು ಕಾರ್ಯಕರ್ತರಿಗೆ ಅಸಮಾಧಾನವಿದೆ. ಅವರು ಪಕ್ಷಕ್ಕೆ ಬಂದು ವರ್ಷವೂ ಕಳೆದಿಲ್ಲ. ಅವರು ಯಡಿಯೂರಪ್ಪ, ರಾಘವೇಂದ್ರ ಅವರ ಹಿಂಬಾಲಕರಷ್ಟೇ. ರಾಜ್ಯದಲ್ಲಿ ಪಕ್ಷ ಶುದ್ಧೀಕರಣವಾಗಬೇಕು ಎಂಬುದು ಕಾರ್ಯಕರ್ತರ ಆಸೆಯಾಗಿದೆ. ಹೀಗಾಗಿ ಭಟ್ಟರ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ನನ್ನ ಗೆಲುವಿನಿಂದ ಸಂದೇಶ: ಈಶ್ವರಪ್ಪ ಅವರ ಬೆಂಬಲ ನನಗೆ ಶಕ್ತಿ ತುಂಬಿದೆ. ನನ್ನ ಸ್ಪರ್ಧೆ ಒಂದು ದಿನದ ನಿರ್ಧಾರವಲ್ಲ. ನನ್ನ ಗೆಲುವು ಬಿಜೆಪಿ ಕೇಂದ್ರ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲಿದೆ. ವ್ಯವಸ್ಥೆ ಸರಿಮಾಡಬೇಕು ಎಂದಾಗ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂದು ಕೆ.ರಘುಪತಿ ಭಟ್ ಹೇಳಿದರು.
ಡಾ. ಧನಂಜಯ ಸರ್ಜಿ ಬಿಜೆಪಿ ನಾಯಕರ ಬೆಂಬಲಿತ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಬಿಜೆಪಿಯಿಂದ ನಾಲ್ಕು ಸದನ ಪ್ರವೇಶಿಸಿದವರು. ಬಿಜೆಪಿಯಿಂದ ಯಾರು ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ಭಾವನೆಯಿದೆ. ಇದನ್ನು ಸುಳ್ಳು ಮಾಡಬೇಕು ಎಂದರು.
ಪ್ರಮುಖರಾದ ಆರ್.ಮದನ್, ಮಾಜಿ ಉಪಮೇಯರ್ ಶಂಕರ್ ಗನ್ನಿ, ಎಂ.ಶಂಕರ್, ವೆಂಕಟೇಶ ರಾವ್ ಇತರರಿದ್ದರು.