

ಉಡುಪಿ: ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜು ವಿರುದ್ಧ ಶಾಸಕ ಕೆ.ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು. ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನಿತಾ ಗುರುರಾಜ್ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಹೆಬ್ರಿ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ವಿಚಾರದಲ್ಲಿ ಅರಣ್ಯ ಅಧಿಕಾರಿ ಹೇಳಿಕೆ ಮತ್ತು ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಗೊಂಡಿತು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಕಾನೂನುಗಳು ಅಡ್ಡಿಯಾಗುತ್ತಿರುವ ಬಗ್ಗೆ ಶಾಸಕ ಕೆ.ರಘುಪತಿ ಪ್ರಸ್ತಾಪಿಸಿದಾಗ, ಪ್ರತಿಕ್ರಿಯಿಸಿದ ಆರ್‌ಎಫ್‌ಒ ಮುನಿರಾಜು, ಮೀಸಲು ಅರಣ್ಯ ವ್ಯಾಪ್ತಿ ಇದಾಗಿರುವುದರಿಂದ ಇಲ್ಲಿ ಅಭಿವೃದ್ಧಿ ಕಾಮಗಾರಿ ಅಸಾಧ್ಯ. ಡೀಮ್ಡ್ ಅರಣ್ಯ ಆದಲ್ಲಿ ಅವಕಾಶವಿದೆ. ಬೇಕಿದ್ದಲ್ಲಿ ಹಿರಿಯ ಅಧಿಕಾರಿಗಳಿಂದಲೂ ಈ ಬಗ್ಗೆ ಪರಿಶೀಲಿಸಬಹುದು. ಆದರೆ ಕಾನೂನು ಬಾಹಿರವಾಗಿ ಮಾಡಲು ಆಗಲ್ಲ ಎಂದರು.
ಈ ಉತ್ತರದಿಂದ ಆಕ್ರೋಶಗೊಂಡ ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ನಮಗೆ ಗೊತ್ತಿದೆ. ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಲು ಸಾಧ್ಯವಿಲ್ಲ. ಇದರಿಂದ ಜನರಿಗೆ ಕಷ್ಟವಾಗುತ್ತಿದೆ. ಮೇಲಿನಿಂದ ಭಿಕ್ಷೆ ಬೇಡಿ ರಸ್ತೆ ಅಭಿವೃದ್ಧಿಗಾಗಿ ಅನುದಾನ ತರುತ್ತೇವೆ, ನೀವು ಇಲಾಖೆ ನಿಯಮಾವಳಿ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ತಡೆಯಾಗುತ್ತಿದ್ದೀರಿ ಎಂದು ಏರುದನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ನಾನೊಬ್ಬ ಅಧಿಕಾರಿ ಗೌರವಕೊಡಿ: ಆರ್‌ಎಫ್‌ಒ ಉತ್ತರದಿಂದ ಮೊದಲೇ ಕೆಂಡಾಮಂಡಲವಾಗಿದ್ದ ಶಾಸಕ ಕೆ.ರಘುಪತಿ ಭಟ್, ಜನಪ್ರತಿನಿಧಿಗಳ ಸಾಲಿನಲ್ಲಿ ಆರ್‌ಎಫ್‌ಒ ಕೂತಿರುವುದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಜನಪ್ರತಿನಿಧಿ ಸಾಲಿನಲ್ಲಿ ಕುಳಿತುಕೊಳ್ಳಲು ನಿಂಗೆ ಯಾರು ಹೇಳಿದ್ದು, ಕೆಳಗೆ ಕುಳಿತುಕೊ’ ಎಂದು ಗುಡುಗಿದರು. ಇದರಿಂದ ಅಸಮಾಧಾನಗೊಂಡ ಅಧಿಕಾರಿ, ‘ಜಾಗ ಇರದಿದ್ದಕ್ಕೆ ಇಲ್ಲಿ ಬಂದು ಕುಳಿತುಕೊಂಡೆವು. ನಾನೊಬ್ಬ ಸರ್ಕಾರಿ ಅಧಿಕಾರಿ ಗೌರವ ನೀಡಿ ಮಾತನಾಡಿ’ ಎಂದರು. ಇದರಿಂದ ಶಾಸಕರು ಮತ್ತಷ್ಟು ಕೆರಳಿ, ‘ಜನಪ್ರತಿನಿಧಿಗಳಿಗೆ ಸಭೆಯಲ್ಲಿ ಅಧಿಕಾರಿಯೊಬ್ಬ ಗೌರವ ಕೊಡುವುದಿಲ್ಲ. ಸಾಮಾನ್ಯ ಸಭೆಗೆ ನಮ್ಮನ್ನು ಯಾಕೆ ಕರೆಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ವಿರುದ್ಧ ನಿರ್ಣಯ: ಅರಣ್ಯಾಧಿಕಾರಿ ಮೇಲೆ ಶಾಸಕರು ತೀರ ತರಾಟೆಗೆ ತೆಗೆದುಕೊಳ್ಳುತಿದ್ದಂತೆ, ಎದ್ದು ನಿಂತ ಅಧಿಕಾರಿ ನಾನೇನು ತಪ್ಪು ಮಾಡಿದೆ ಸರ್, ನಿಮ್ಮ ಪ್ರಶ್ನೆಗೆ ಮಾತ್ರ ಉತ್ತರಿಸಿದೆ ಎಂದರು. ಪ್ರತಿಕ್ರಿಯಿಸಿದ ರಘುಪತಿ ಭಟ್, ಅಧಿಕಾರಿಗಳದ್ದು ಪ್ರೆಶ್ನೆಗೆ ಉತ್ತರಿಸುವುದಷ್ಟೆ ಕೆಲಸ, ಜನಪ್ರತಿನಿಧಿಗಳಂತೆ ವಾದ ಮಾಡುವುದಲ್ಲ. ವಿಧಾನಸೌಧದಲ್ಲಿ ಇಲಾಖೆ ಹಿರಿಯ ಅಧಿಕಾರಿಗಳೇ ಹೀಗೆ ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿ ದುರ್ವರ್ತನೆ ತೋರಿದ್ದಾರೆ. ಉದ್ಧಟತನದಿಂದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಅಗೌರವ ತಂದಿದ್ದಾರೆ ಎಂದು ಸರ್ವ ಸದಸ್ಯರು ದನಿಗೂಡಿಸಿ ಅಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ ಕೈಗೊಂಡರು.
9 ಲಕ್ಷ ಮೆಟ್ರಿಕ್ ಟನ್ ಮರಳು ತೆರವಿಗೆ ಅನುಮತಿ: ಜಿಲ್ಲೆಯಲ್ಲಿ 9ಲಕ್ಷ ಮೆಟ್ರಿಕ್ ಟನ್ ಲಭ್ಯವಿರುವ ಮರಳಿನ ದಿಬ್ಬ ಗುರುತಿಸಿ ಅನುಮೋದನೆಗಾಗಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರಕ್ಕೆ (ಕೆಸಿಎಂಝಡ್) ಪ್ರಸ್ತಾವನೆ ಕಳಿಸಲಾಗಿದ್ದು, ಇದೀಗ ಮರಳು ದಿಬ್ಬ ತೆರವಿಗೆ ಅನುಮತಿ ಸಿಕ್ಕಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು. ಮರಳು ಸಮಸ್ಯೆ ವಿಚಾರವಾಗಿ ನಡೆಯುತ್ತಿದ್ದ ಚರ್ಚೆ ವೇಳೆ ಮಾತನಾಡಿದ ಅವರು. ಎರಡು-ಮೂರು ದಿನಗಳಲ್ಲಿ ಜಿಲ್ಲಾ ಮರಳು ಸಮಿತಿ ಸಭೆ ನಡೆದು, ಮುಂದಿನ ವಾರದ ಒಳಗೆ 171 ಪರವಾನಗಿದಾರರಿಗೆ ಮರಳು ದಿಬ್ಬ ತೆರವು ನೀಡಲು ಅನುಮತಿ ನೀಡಲಾಗುವುದು. ಆ್ಯಪ್ ಮೂಲಕವೇ ಮರಳು ವಿತರಿಸುವ ಕಾರ್ಯ ಶೀಘ್ರ ನಡೆಯಲಿದೆ ಎಂದರು.
ಸಂತ್ರಸ್ತರಿಗೆ ಮನೆ ನಿರ್ಮಿಸಿಲ್ಲ: ಸಭೆಯಲ್ಲಿ ಅಂಗವಿಲಕಲರ ಪಿಂಚಣಿ ಸೇವೆ ನೀಡುವ ಬಗ್ಗೆ ಇರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಸದಸ್ಯೆ ಡಾ.ಸುನೀತಾ ಶೆಟ್ಟಿ ಒತ್ತಾಯಿಸಿದರು. ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ನ ಭೂಸ್ವಾಧೀನ ಸಂತ್ರಸ್ತರಿಗೆ ಮೂರು ವರ್ಷ ಕಳೆದರೂ ವಸತಿ ನಿರ್ಮಿಸಿ ಕೊಟ್ಟಿಲ್ಲ ಎಂದು ಸದಸ್ಯೆ ರೇಣುಕಾ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೋಹನ್‌ರಾಜ್ ಹೇಳಿದರು. ಪಲಿಮಾರು ಗ್ರಾಮ ಪಂಚಾಯಿತಿ ಗ್ರಂಥಾಲಯ ಕಟ್ಟಡ ನಿರ್ಮಾಣ, ಉಪ್ಪೂರು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಶೌಚಗೃಹ ನಿರ್ಮಾಣ ಬೇಡಿಕೆ ಬಗ್ಗೆ ಚರ್ಚೆ ನಡೆಯಿತು.