ಸೇಬು ಬೆಳೆದು ಸೈ ಎನಿಸಿಕೊಂಡ ರೈತ ರಘು

14 NMG 01 (5)
ಯುವ ರೈತ ರಘು ತಮ್ಮ ಜಮೀನಿನಲ್ಲಿ ಬೆಳೆಯುತ್ತಿರುವ ಸುಗಂಧರಾಜ ಹೂವಿನ ಗಿಡಗಳು.
Published on

ನಾಗಮಂಗಲ: ನಾಗಮಂಗಲ ತಾಲೂಕು ಬರಪೀಡಿತ ಪ್ರದೇಶ. ಅದರಲ್ಲಿಯೂ ಪ್ರಮುಖವಾಗಿ ನೀರಾವರಿ ಸೌಲಭ್ಯವಿಲ್ಲದ ಬೋಗಾದಿ ಭಾಗದ ಗಿಡುವಿನಹೊಸಹಳ್ಳಿಯಲ್ಲಿ ಆ್ಯಪಲ್ ಬೆಳೆದು ಸೈ ಎನಿಸಿಕೊಳ್ಳುವ ಮೂಲಕ ಯುವ ರೈತ ರಘು ಇತರರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ಗಿಡುವಿನಹೊಸಹಳ್ಳಿ ಗ್ರಾಮದ 35 ವರ್ಷದ ರಘು ಬಿಎ ವಿದ್ಯಾಭ್ಯಾಸ ಮುಗಿಸಿದ್ದು, ಬಳಿಕ ನಗರ ಪ್ರದೇಶಗಳಿಗೆ ವಲಸೆ ಹೋಗದೆ ಹುಟ್ಟೂರಿನಲ್ಲಿಯೇ ಕೃಷಿ ಮೂಲಕ ಜೀವನ ರೂಪಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದು ಸಮಗ್ರ ಕೃಷಿಯತ್ತ ಮುಖ ಮಾಡಿದ್ದಾರೆ.

ಕಾಶ್ಮೀರಕ್ಕೆ ಸೀಮಿತ ಎಂದೆನಿಸಿದ್ದ ಸೇಬನ್ನು ಬರಪ್ರದೇಶದಲ್ಲಿ ಫಲವತ್ತಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಮೊದಲ ಹಂತವಾಗಿ ಪ್ರಾಯೋಗಿಕವಾಗಿ 20 ಸೇಬಿನ ಗಿಡಗಳನ್ನು ನೆಟ್ಟು ಉತ್ತಮ ಫಲವತ್ತತೆ ಕಂಡ ಬಳಿಕ ಬರದ ನಾಡಿನಲ್ಲೂ ಸೇಬು ಬೆಳೆಯಬಹುದು ಎಂಬುದನ್ನು ಇತರರಿಗೆ ನಿರೂಪಿಸಿದ್ದಾರೆ. 20 ಗಿಡಗಳಲ್ಲಿ ಒಂದೊಂದು ಗಿಡದಲ್ಲಿಯೂ ಕೆಜಿಗಟ್ಟಲೇ ಸೇಬು ಬೆಳೆದ ಜೋತುಬಿದ್ದಿವೆ. ಈ ಪ್ರದೇಶದಲ್ಲಿ ಸೇಬು ಬೆಳೆದ ರೈತ ರಘು ಮೊದಲಿಗ ಎನ್ನುವ ಕಾರಣಕ್ಕೆ ಸುತ್ತಲಿನ ಗ್ರಾಮಗಳ ರೈತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ.

ಫಲವತ್ತಾಗಿ ಬೆಳೆದ ಸೇಬಿಗೆ ಮಾರುಕಟ್ಟೆ ಸಮಸ್ಯೆ ಎದುರಾಗದೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಕಾರಣ ಸುತ್ತಮುತ್ತಲಿನ ಜನರು ಜಮೀನಿಗೆ ಬಂದು ಸೇಬು ಖರೀದಿಸುತ್ತಿರುವುದು ವಿಶೇಷ. ಈ ಭೂಮಿಯಲ್ಲಿ ನಿಜಕ್ಕೂ ಸೇಬು ಬೆಳೆಯಲು ಸಾಧ್ಯವೇ ಎಂದು ಆರಂಭದಲ್ಲಿ ರೈತ ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದರಂತೆ. ಆದರೆ ಗಿಡ ತರಲು ಹೋದ ಸಂದರ್ಭ ಸೇಬು ಬೆಳೆದೇ ಬೆಳೆಯುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೊಂದುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ಸಮಗ್ರ ಕೃಷಿ ಪದ್ಧತಿ: ರೈತರು ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿರುವುದನ್ನು ಅರಿತ ರಘು ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ಬೆಳೆ ಬೆಳೆಯುತ್ತಿದ್ದು, ಸಮಗ್ರ ಕೃಷಿ ಮಾದರಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಒಂದು ಬೆಳೆ ಕೈ ಹಿಡಿಯದಿದ್ದರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ ಎಂದು ಸಮಗ್ರ ಕೃಷಿಗೆ ಮುಂದಾಗಿ ಸುಮಾರು 10ಕ್ಕೂ ಹೆಚ್ಚು ರೀತಿಯ ಬೆಳೆ ಬೆಳೆಯುತ್ತಿದ್ದಾರೆ. ಆ ಮೂಲಕ ನಷ್ಟ ಎಂಬುದು ತಮ್ಮತ್ತ ಸುಳಿಯದಂತೆ ಮಾದರಿ ಕೃಷಿ ಪಾಲಿಸುತ್ತಿದ್ದಾರೆ. ಸಮಗ್ರ ಕೃಷಿಯಿಂದ ಕನಿಷ್ಠ ಎಂದರೂ ಹಾಕಿದ ಬಂಡವಾಳವಾದರೂ ಕೈ ಸೇರುತ್ತಿದ್ದು, ಅದಕ್ಕೂ ಮಿಗಿಲಾಗಿ ನಷ್ಟವಾಗುವಂತ್ತಿದ್ದರೆ ಮತ್ತೊಂದು ಬೆಳೆ ಕೈಹಿಡಿಯಲಿದೆ ಎಂಬುದು ರೈತ ರಘುವಿನ ಮಾತು. ಹೀಗಾಗಿಯೇ ಜಮೀನಿನಲ್ಲಿ ಸುಮಾರು 10ಕ್ಕೂ ಹೆಚ್ಚು ರೀತಿಯ ಬೆಳೆ ಬೆಳೆದಿದ್ದಾರೆ.

ರೈತನನ್ನು ರಾಜನನ್ನಾಗಿಸುವ ಸುಗಂಧರಾಜ: ತರಕಾರಿ ಬೆಳೆಯುತ್ತಿದ್ದ ರಘು ಅದನ್ನು ನಿಲ್ಲಿಸಿ 30 ಗುಂಟೆ ವಿಸ್ತೀರ್ಣದಲ್ಲಿ ಸುಗಂಧರಾಜ ಹೂವನ್ನು ಬೆಳೆಯಲು ಮುಂದಾಗಿದ್ದಾರೆ. ಮತ್ತೊಂದು ವಿಶೇಷ ಎಂದರೆ ಸಾವಯವ ಮಾದರಿಯಲ್ಲಿ ಬೆಳೆಯುತ್ತಿರುವುದು. ಗಿಡಗಳು ಹೂವು ಬಿಡುವ ಹಂತದಲ್ಲಿದ್ದು ಈಗಾಗಲೇ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಕೆಜಿಗೆ 90 ರೂ.ನಂತೆ ಹೂವು ಪಡೆಯುವುದಾಗಿ ಹೂವಿನ ವ್ಯಾಪಾರಿಯೊಬ್ಬರು ಜಮೀನಿಗೆ ಬಂದು ಒಪ್ಪಂದ ಮಾಡಿಕೊಂಡಿದ್ದಾರಂತೆ. ಸುಗಂಧರಾಜ ಬೆಳೆದರೆ ನಿಜಕ್ಕೂ ರೈತ ರಾಜನಂತಿರಬಹುದು ಎಂದು ರೈತ ರಘು ವಿಜಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.

ತುಂತುರು ನೀರಾವರಿ ಅಳವಡಿಕೆ: ರಾಸಾಯನಿಕ ಬಳಕೆ ಮಾಡಿ ಸೇಬು, ಸುಗಂಧರಾಜ, ಶುಂಟಿ ಸೇರಿದಂತೆ ಮುಂತಾದವುಗಳನ್ನು ಬೆಳೆಯುವುದು ಕಷ್ಟಕರವಾಗಿರುವ ಇಂತಹ ಸಂದರ್ಭದಲ್ಲಿ ಅಪರೂಪದ ಬೆಳೆಗಳನ್ನು ಸಾವಯವ ಮೂಲಕ ಬೆಳೆಯಬಹುದು ಎಂಬುದನ್ನು ರೈತ ರಘು ತಮ್ಮ ಜಮೀನಿನಲ್ಲಿ ಸಾಕ್ಷೀಕರಿಸಿದ್ದಾರೆ.

ಸುಗಂಧರಾಜ ಹೂವಿನ ಗಿಡಕ್ಕೆ ತುಂತುರು ನೀರಾವರಿ ಅಳವಡಿಸಿದ್ದಾರೆ. ಇದರೊಂದಿಗೆ ಸಾವಯವ ಮಾದರಿಯ ಔಷಧಗಳನ್ನು ತಾವೇ ಸಿದ್ಧಪಡಿಸಿ ತುಂತುರು ನೀರಾವರಿ ಮೂಲಕ ಗಿಡಗಳಿಗೆ ರೋಗ ಬಾರದಂತೆ ಸಿಂಪಡಣೆ ಮಾಡುತ್ತಿದ್ದಾರೆ. ಹಸುವಿನ ಗಂಜಲದ ಮೂಲಕ ಜೀವಾಮೃತ ಸಿದ್ಧಪಡಿಸಿಕೊಳ್ಳುವುದು ಮಾತ್ರವಲ್ಲದೆ ಕೋಳಿಗೊಬ್ಬರವನ್ನು ದ್ರವರೂಪಕ್ಕೆ ಮಾರ್ಪಾಡಿಸಿ ಗಿಡಗಳಿಗೆ ಸಿಂಪಡಿಸುವ ಮೂಲಕ ಉತ್ತಮ ಫಲವತ್ತತೆ ಕಾಣುತ್ತಿದ್ದಾರೆ. ಕೋಳಿ ಗೊಬ್ಬರದೊಂದಿಗೆ ಸಗಣಿ, ಕುರಿ, ಮೇಕೆಗಳ ಗೊಬ್ಬರವನ್ನೂ ಬೆಳೆಗಳಿಗೆ ಹಾಕುವ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಲಾಗಿದೆ ಎಂದು ರಘು ಮಾಹಿತಿ ನೀಡಿದರು.

ತೋಟದಲ್ಲಿರುವ ಬೆಳೆಗಳು: ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಮಾಡುತ್ತಿರುವ ಯುವರೈತ ರಘು ತಮ್ಮ ಜಮೀನಿನಲ್ಲಿ 20 ಸೇಬಿನ ಗಿಡ, ಲಿಚ್ಚಿ 1, ಲಂಗನ್ 1, ಹಲಸು, 20 ಗುಂಟೆ ವಿಸ್ತೀರ್ಣದಲ್ಲಿ ಶುಂಠಿ, 20 ಗುಂಟೆ ವಿಸ್ತೀರ್ಣದಲ್ಲಿ ಸುಗಂಧರಾಜ ಹೂವಿನ ಗಿಡ, 200 ಮಾವು, 350 ತೆಂಗು, ಪೈನಾಪಲ್, ಬಾಳೆ, ರಾಗಿ, ಹುರುಳಿ ಮುಂತಾದ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ಕೆಲಸಗಾರರ ಸಮಸ್ಯೆ: ಹತ್ತಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಯುವರೈತ ರಘು ಒಬ್ಬರೇ ಜಮೀನಿನಲ್ಲಿ ದಿನಪೂರ್ತಿ ಶ್ರಮಿಸುತ್ತಾರೆ. ತಂದೆ ನಿಧನರಾದ ಬಳಿಕ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಘು ಅವಿವಾಹಿತರಾಗಿದ್ದು ರೈತ ಎಂಬ ಕಾರಣಕ್ಕೆ ಹೆಣ್ಣು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಷ್ಟೆಲ್ಲ ಬೆಳೆ ಬೆಳೆಯಲು ಕೃಷಿ ಕಾರ್ಮಿಕರು ಸಿಗದಿರುವ ಕಾರಣ ನೆರೆಯ ತಾಲೂಕುಗಳಿಂದ ಕೆಲವು ಸಂದರ್ಭಗಳಲ್ಲಿ ಕಾರ್ಮಿಕರನ್ನು ಕರೆಸಿಕೊಂಡು ಕೆಲಸ ಮಾಡಿರುವುದೂ ಉಂಟು. ಸ್ಥಳೀಯವಾಗಿ ಕೃಷಿ ಕೆಲಸಕ್ಕೆ ಜನರು ಬಾರದಂತಾಗಿದ್ದು ಕೆಲವು ಸಂದರ್ಭಗಳಲ್ಲಿ ಕೃಷಿಯೇ ಬೇಡವೆಂದು ಬೇಸರವಾಗುತ್ತದೆ. ಕೆಲಸಗಾರರು ಸರಿಯಾದ ಸಮಯಕ್ಕೆ ಸಿಗದಿರುವ ಕಾರಣ ಕೆಲವೊಮ್ಮೆ ನಷ್ಟ ಅನುಭವಿಸಿಸುವಂತಾಗಿದೆ ಎನ್ನುತ್ತಾರೆ ರಘು.

ಕೃಷಿಯಿಂದ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗುವುದಿಲ್ಲ. ಆದರೆ ಕೃಷಿಯನ್ನು ಅಪ್ಪ ಹಾಕಿದ ಆಲದ ಮರದಂತೆ ಹಳೆಯ ಮಾದರಿಯಲ್ಲಿ ಮುಂದುವರಿಸಿದರೆ ಖಂಡಿತವಾಗಿಯೂ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾರೂ ಒಂದು ರೀತಿಯ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಒಳ್ಳೆಯದು. ಪ್ರಾಯೋಗಿಕವಾಗಿ 20 ಸೇಬು ಗಿಡ ಹಾಕಲಾಗಿದ್ದು, ಮುಂದೆ ಹೆಚ್ಚು ಗಿಡಗಳನ್ನು ಹಾಕಲಾಗುವುದು. ವರ್ಷಪೂರ್ತಿ ಫಲ ನೀಡುವ ಸೇಬಿನ ಗಿಡಗಳನ್ನು ಬೆಳೆಯುತ್ತಿದ್ದೇನೆ. ಸುಗಂಧರಾಜ ಹೂವಿಗೆ ಉತ್ತಮ ಬೇಡಿಕೆಯಿದ್ದು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಉತ್ಸುಕನಾಗಿದ್ದೇನೆ.
ರಘು, ಯುವರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net