

ಮಡಿಕೇರಿ:
ಕೊಡಗು ಮೂಲದ ಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಪಾಡಂಡ ಟಿ. ರಘು (76) ಗುರುವಾರ (ಮಾ.20) ಬೆಂಗಳೂರಿನಲ್ಲಿ ನಿಧನರಾದರು. ಶುಕ್ರವಾರ ಬೆಂಗಳೂರು ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಇವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.
ಮಡಿಕೇರಿಯಲ್ಲಿ ಮಿಸ್ ಲೀಲಾವತಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಿಕ್ಕಿದ ಚಿಕ್ಕ ಪಾತ್ರ ಇವರಿಗೆ ಸಿನಿಮಾದ ಹುಚ್ಚು ಹತ್ತುವಂತೆ ಮಾಡಿತು. ಆಗ 10ನೇ ತರಗತಿಯಲ್ಲಿ ಇದ್ದ ರಘು ನಟನಾಗುವ ಆಸೆಯಿಂದ ಅಂದಿನ ಮದ್ರಾಸ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಆಗಿದ್ದು ಮಾತ್ರ ನಿರ್ದೇಶಕ.
ಮಡಿಕೇರಿ ತಾಲೂಕು ಮದೆನಾಡು ಬಳಿಯ ಬೆಟ್ಟತ್ತೂರು ಮೂಲದ ರಘು ಹುಟ್ಟಿ ಬೆಳೆದಿದ್ದು ಮಡಿಕೇರಿಯಲ್ಲಿ. ತಂದೆ ಪೊಲೀಸ್ ಇಲಾಖೆಯಲ್ಲಿ ಇದ್ದ ಕಾರಣ ಮಡಿಕೇರಿಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಚೆನ್ನೆöÊನಲ್ಲಿ ನಿರ್ದೇಶಕ ಬಿ. ವಿಟ್ಠಲಾಚಾರ್ಯ ಗರಡಿಯಲ್ಲಿ ಪಳಗಿದ ರಘು ವೈ.ಆರ್ ಸ್ವಾಮಿ ಬಳಿಯೂ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ, ಹಿಂದಿ, ಮಲೆಯಾಳಂ ಚಿತ್ರಗಳು ಹಾಗೂ ಕೊಡವ ಭಾಷೆಯ ಧಾರವಾಹಿಗಳು ರಘು ನಿರ್ದೇಶನದಲ್ಲಿ ಮೂಡಿಬಂದಿದೆ. ನಿರ್ಮಾಪಕ, ನಟ ಹಾಗೂ ಚಿತ್ರಕತೆ ರಚನೆಯಲ್ಲೂ ಇವರು ಸೈ ಅನ್ನಿಸಿಕೊಂಡಿದ್ದರು.
ಕನ್ನಡದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಈ ಪೈಕಿ 25 ಚಿತ್ರಗಳಲ್ಲಿ ಅಂಬರೀಷ್ ಅವರೇ ಹೀರೋ. ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ‘ನ್ಯಾಯ, ನೀತಿ, ಧರ್ಮ’ದಿಂದ ಆರಂಭವಾದ ರಘು ಮತ್ತು ಅಂಬರೀಷ್ ಜೋಡಿಯ ಮೋಡಿ ಸಾಕಷ್ಟು ಸದ್ದು ಮಾಡಿತ್ತು. ಅಂಬರೀಷ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟ ಮಂಡ್ಯದ ಗಂಡು ಸಿನಿಮಾದ ನಿರ್ದೇಶಕ ಕೂಡ ಎ.ಟಿ. ರಘು.
ಹಿಂದಿಯಲ್ಲಿ ರಜನೀಕಾಂತ್ ನಾಯಕತ್ವದ ಮೇರಿ ಅದಾಲತ್ ಸಿನಿಮಾವನ್ನು 1984ರಲ್ಲಿ ನಿರ್ದೇಶಿಸಿದ್ದರು. ಮಲೆಯಾಳಂನಲ್ಲಿ ಕಟ್ಟುರಾಣಿ ಹೆಸರಿನ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.
ಕೊಡವ ಭಾಷೆಯಲ್ಲಿ ಐನ್‌ಮನೆ, ಗೆಜ್ಜೆತಂಡು ಹಾಗೂ ನಂಗ ಕೊಡವ ಸೇರಿದಂತೆ 6 ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. 2014ರಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 2020ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿತ್ತು.
ರಘು ಅವರೊಬ್ಬ ಉತ್ಸಾಹಿ ಕಲಾರಾಧಕ, ಚಿತ್ರ ನಿರ್ದೇಶಕ, ನಿರ್ಮಾಪಕ, ನಟ. ಕಲೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಹುಮ್ಮನಸ್ಸಿನ ವ್ಯಕ್ತಿತ್ವ ಅವರದ್ದಾಗಿತ್ತು. ಕೊಡವ ಸಾಹಿತ್ಯ ಅಕಾಡೆಮಿಯಲ್ಲೂ ಉತ್ತಮ ಕೆಲಸ ಮಾಡಿದ್ದಾರೆ.
- ಡಾ. ಮೇಚೀರ ಸುಬಾಷ್ ನಾಣಯ್ಯ, ಮಾಜಿ ಸದಸ್ಯ, ಕೊಡವ ಸಾಹಿತ್ಯ ಅಕಾಡೆಮಿ