

ಭಟ್ಕಳ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವು ಇಲ್ಲಿನ ಮನುಪ್ರಭು ಸಂಕಲ್ಪದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರದಿಂದ ವಿಜೃಂಭಣೆಯಿಂದ ಪ್ರಾರಂಭಗೊಂಡಿದೆ.
ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ವೈದಿಕ ವೃಂದದಿಂದ ಧಾರ್ಮಿಕ ಅನುಷ್ಠಾನ ನಡೆದು, ವಿಶೇಷ ಪಂಚಾಮೃತ ಅಭಿಷೇಕ, ರಾಯರ ಪಾದ್ಯಪೂಜೆ, ಸತ್ಯನಾರಾಯಣ ವೃತ ನಡೆದು ಬಳಿಕ ಮಹಾಪೂಜೆ, ಅಖಂಡ ಭಜನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ರಾಯರ ದರ್ಶನ ಮಾತ್ರದಿಂದ ಕಷ್ಟಗಳು ಕರಗಿ ಮನಸ್ಸು ಪಾವನವಾಗುವದು ಎನ್ನುವ ನಂಬಿಕೆಯಿಂದ ಸಹಸ್ರಾರು ಜನರು ಸರತಿಯ ಸಾಲಿನಲ್ಲಿ ನಿಂತು ರಾಯರ ದರ್ಶನ ಮಾಡಿದರು. ಕಿಕ್ಕಿರಿದು ನೆರೆದ ಜನಸ್ತೋಮದ ನಡುವೆ ಸಂಜೆ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಭಕ್ತಾರಿಂದ ಶ್ರೀ ಗುರುಸಾರ್ವಭೌಮರ ಪಾದ್ಯಪೂಜೆ, ವಿಶೇಷ ಕ್ಷೀರಾಭಿಷೇಕ ನಡೆದವು. ಸೋಮವಾರ ಮಧ್ಯಾರಾಧನೆ, ಮಂಗಳವಾರ ಉತ್ತರಾಧನೆ ಚರಿಸಲಾಗುತ್ತದೆ. ಸಾಮೂಹಿಕ ಗಣಹೋಮ, ಮಹಾಪೂಜೆ, ರಾತ್ರಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಉದಯ ಪ್ರಭು ಬಳಗದಿಂದ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.