ಸಿದ್ಧಿಗಾಗಿ ನಿರಂತರ ಪ್ರಯತ್ನ ಇರಲಿ ; ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಕರೆ

6 madivala 01
Published on

ಮಡಿವಾಳ: ಜಗತ್ತು ಪ್ರಸಿದ್ಧಿಯ ಭ್ರಮೆಯಲ್ಲಿದೆ. ಜೀವನದಲ್ಲಿ ಸಿದ್ಧಿ ಸಾಧಿಸಿದಾಗ ಸಹಜವಾಗಿಯೇ ಪ್ರಸಿದ್ಧಿ ಬರುತ್ತದೆ. ಆದ್ದರಿಂದ ನಮ್ಮೆಲ್ಲರ ಪ್ರಯತ್ನ ಸಿದ್ಧಿಯತ್ತ ಇರಲಿ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಮಾಲೂರು ಸಮೀಪದ ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮದ ಆವರಣದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಸಿದ್ದಾಂಜನೇಯ ದೇವಾಲಯದ ಅಷ್ಟಬಂಧ-ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಯೋಗದ ಸಿದ್ಧಿಯ ಜತೆಗೆ ಯೋಧನ ಸಿದ್ಧಿಯನ್ನೂ ಹೊಂದಿದ್ದ ಆಂಜನೇಯ ವೀರಾಧಿವೀರ. ಆತನ ವಿನಮ್ರತೆ  ಲೋಕಕ್ಕೇ ಮಾದರಿ. ಭಕ್ತನೇ ಭಗವಂತನಾಗುವಷ್ಟರ ಮಟ್ಟಿಗೆ ಭಕ್ತನಾಗಿ ಸಿದ್ಧಿ ಹೊಂದಿದ್ದ. ಮನೆ ಮತ್ತು ಮಂದಿರ ನಿರ್ಮಿಸುವ ನಡುವೆ ದೊಡ್ಡ ಅಂತರವಿದೆ. ಎಷ್ಟೇ ವೈಭೋಗದ ಮನೆ ಇದ್ದರೂ ಸಮಾಜ ಅವರನ್ನು ಸ್ಮರಿಸಿಕೊಳ್ಳುವುದಿಲ್ಲ. ಆದರೆ ಒಂದು ಮಂದಿರ ನಿರ್ಮಿಸಿದಾಗ ಅದು ಸಮಾಜದ ಸ್ವತ್ತಾಗುತ್ತದೆ. ಸಮಾಜ ಅವರನ್ನು ಗುರುತಿಸುತ್ತದೆ. ದೇವರ ಪ್ರತಿಷ್ಠಾಪನೆಯಂತಹ ಕಾರ್ಯ ಜೀವನದಲ್ಲಿ ಇತಿಹಾಸವಾಗಿ ಉಳಿದುಕೊಳ್ಳುವಂಥದ್ದು ಎಂದು ಬಣ್ಣಿಸಿದರು. ಕಾರ್ಯಕರ್ತರ ಶ್ರಮ, ತ್ಯಾಗದ ಪ್ರತೀಕವಾಗಿ ಸುಂದರ ಮಂದಿರ ತಲೆ ಎತ್ತಿದೆ. ಭವ್ಯಮಂದಿರ ನಿರ್ಮಾಣಕ್ಕೆ ಶ್ರಮಿಸಿದ  ಭಕ್ತರ ಮನೆ, ಬದುಕನ್ನೂ ಹನುಮಂತ ನಿರ್ಮಿಸಿಕೊಡಲಿ ಎಂದು ಆಶಿಸಿದರು.

ಸಂಸದ ಮುನಿಸ್ವಾಮಿ ಮಾತನಾಡಿ, ಮಾಲೂರು ರಸ್ತೆಯಿಂದ ಗೋ ಆಶ್ರಮದವರೆಗೆ ರಸ್ತೆ, ಕೃಷಿ ಹೊಂಡ, ಗೋವುಗಳಿಗೆ ಮೇವು ಸಂಗ್ರಹ ಘಟಕ, ಗೋ ಆಶ್ರಮ ಶಾಖೆಗಳ ಪ್ರಾರಂಭಕ್ಕೆ ಸಹಕಾರ ನೀಡಲಾಗುವುದು. ಆಶ್ರಮದಲ್ಲಿ ನೈಸರ್ಗಿಕ ಗೋ ಉತ್ಪನ್ನಗಳು ಲಭ್ಯವಿದ್ದು, ಅದನ್ನು ಹೆಚ್ಚಾಗಿ ಬಳಸಿ ಎಂದು ಹೇಳಿದರು.

ಬಿಜೆಪಿ ಮುಖಂಡ ಹೂಡಿ ವಿಜಯ ಕುಮಾರ್, ತಹಸೀಲ್ದಾರ್ ರಮೇಶ್, ಶ್ರೀಮಠದ ಧರ್ಮ ಕರ್ಮ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಭಟ್ ಕೂಟೇಲು, ಶ್ರೀಮಠದ ಸಿಇಒ ಕೆ.ಜಿ.ಭಟ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಮಾ ಗೋ ಪ್ರಾಡಕ್ಟ್ ್ಸನ ವ್ಯವಸ್ಥಾಪಕ ನಿರ್ದೇಶಕ ಸೋನಿಕಾಜಿ, ದೇವಾಲಯ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ರಾಮಕೃಷ್ಣ ರಾವ್, ದೇವಸ್ಥಾನ ಸಮಿತಿ ಅಧ್ಯಕ್ಷ  ಡಾ.ಶ್ಯಾಮ್ಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ್ ಹೆಗಡೆ, ಕೋಶಾಧ್ಯಕ್ಷ ರಾಮಕೃಷ್ಣ ಹೆಗಡೆ ಕಲ್ಲಬ್ಬೆ, ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ ಮತ್ತಿತರರಿದ್ದರು.

ಶೀಘ್ರದಲ್ಲೇ ಡಾಂಬರೀಕರಣ: ಐಟಿಸಿ ಫ್ಯಾಕ್ಟರಿ ಬಳಿಯಿಂದ ರಾಘವೇಂದ್ರ ಗೋ ಆಶ್ರಮದವರೆಗಿನ ರಸ್ತೆಯನ್ನು ಡಾಂಬರೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಲೂರು ಶಾಸಕ ನಂಜೇಗೌಡ ಹೇಳಿದರು. ಶ್ರೀರಾಮಚಂದ್ರಾಪುರ ಮಠ ಮಾಡುತ್ತಿರುವ ಗೋಸೇವೆ ಸಮಾಜಕ್ಕೆ ಸ್ಫೂರ್ತಿ ಎಂದು ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net