ವಿಜೃಂಭಣೆಯಿಂದ ಆರಂಭವಾದ ರಾಯರ ಆರಾಧನೆ, ವೃಂದಾವನ ದರ್ಶನಕ್ಕೆ ಧಾವಿಸಿದ ಭಕ್ತರು

IMG-20240820-WA0052-1.jpg
Published on

ಹುಬ್ಬಳ್ಳಿ: ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಪೂರ್ವಾರಾಧನೆಗೆ ಭಕ್ತರ ದಂಡು ರಾಯರ ಮಠಗಳತ್ತ ಹರಿದು ಬಂತು. ಮಂತ್ರಾಲಯ ವೈಭವವನ್ನೇ ಕಾಣುವಂತೆ ರಾಯರ ಶ್ರೀಮಠಗಳಲ್ಲಿ ವೃಂದಾವನ ಅಲಂಕಾರ ಗಮನ ಸೆಳೆಯಿತು. ಪಂಚ ರಾತ್ರೋತ್ಸವದ ಪೂರ್ವಾರಾಧನೆ ಭಕ್ತಿ ರಸದಲ್ಲಿ ಭಕ್ತರು ಮಿಂದೇಳುವಂತೆ ಮಾಡಿತ್ತು.

ಇಲ್ಲಿನ ಭವಾನಿನಗರದ ನಂಜನಗೂಡು ರಾಯರ ಮಠದಲ್ಲಿ ಬೆಳಗ್ಗೆಯೇ ಸುಪ್ರಭಾತ, ಪಾರಾಯಣ ಮೊದಲಾದ ಕಾರ್ಯಕ್ರಮಗಳು ವಿಶೇಷವಾಗಿ ಜರುಗಿದವು. ರಾಯರ ಅಂತರಂಗದ ಭಕ್ತರಾಗಿದ್ದ ಅಪ್ಪಣ್ಣಾಚಾರ್ಯರ ಕೃತ ರಾಘವೇಂದ್ರಸ್ವಾಮಿಗಳ ಕುರಿತು ರಚಿಸಿದ ಅಷ್ಟೋತ್ತರ ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕ ನಡೆದಿದ್ದು, ಭಕ್ತರನ್ನು ಕೃತಾರ್ಥರನ್ನಾಗಿಸಿತು.

ವಿಶೇಷವಾಗಿ ನಾನಾ ತರಹದ ಹೂವಿನಿಂದ ಮಾಡಿದ ವೃಂದಾವನ ಅಲಂಕಾರ ಗಮನ ಸೆಳೆಯಿತು. ವಿಷ್ಣು ಸಹಸ್ರನಾಮ ಪಾರಾಯಣ, ನಿರಂತರ ಭಜನೆ, ನಂತರ ರಾಯರಿಗೆ ಕನಕಾಭಿಷೇಕ ಭಕ್ತಿ ಶ್ರದ್ಧೆಯಿಂದ ನಡೆದವು.

ಪವಮಾನ ಹೋಮ ಅಲ್ಲದೇ ರಾಘವೇಂದ್ರಸ್ವಾಮಿಗಳು ರಚಿಸಿದ ವಿವಿಧ ಗ್ರಂಥಗಳ ಪಾರಾಯಣವನ್ನು ವಿವಿಧ ವಿದ್ವಾಂಸರಿಂದ ಜರುಗಿತು.

ಭಕ್ತರು ನಾನಾ ವಿಧದ ಸೇವೆ ಸಲ್ಲಿಸಿದರು. ನೈವೇದ್ಯೆ, ಹಸ್ತೋದಕ, ಮಹಾಮಂಗಳಾರತಿ, ಅಲಂಕಾರ ಹಾಗೂ ಭೋಜನ ಕಾರ್ಯಕ್ರಮಗಳು ಜರುಗಿದವು.

ಸಂಜೆ ಭಜನಾ ಮಂಡಳಿಗಳಿಂದ ಭಜನೆ, ಪಲ್ಲಕ್ಕಿ ಮಹೋತ್ಸವ, ಅಷ್ಟಾವಧಾನ, ಮಂತ್ರಪುಷ್ಪ ಸರ್ವ ಸಮರ್ಪಣ ಸೇವೆ ಸಾಗಿ ಬಂದವು.

ಮಠಾಧಿಕಾರಿ ರಾಘವೇಂದ್ರಾಚಾರ್ಯ, ವಿಚಾರಣಾಕರ್ತರಾದ ಎ.ಸಿ. ಗೋಪಾಲ, ಅರ್ಚಕ ಗುರುರಾಜಾಚಾರ್ಯ ಸಾಮಗ, ವ್ಯವಸ್ಥಾಪಕ ವೇಣುಗೋಪಾಲಾಚಾರ್ಯರು, ಬಿಂದುಮಾಧವ ಪುರೋಹಿತ, ಗೋಪಾಲ ಕುಲಕರ್ಣಿ, ಮನೋಹರ ಪರ್ವತಿ, ಗೋವಿಂದ ಜೋಶಿ, ಮಧ್ವೇಶ, ನಾರಾಯಣಾಚಾರ್ಯ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net