ರಾಘವಚೈತನ್ಯ ಮಂದಿರ ನಿರ್ಮಾಣ ಸಂಕಲ್ಪ

0803Aland1.........
Published on

ಆಳಂದ: ಪಟ್ಟಣದ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಒಳಗಿರುವ ಶ್ರೀ ರಾಘವಚೈತನ್ಯ ಲಿಂಗದ ಸ್ಥಳದಲ್ಲಿ ಭವ್ಯ ಮಂದಿರ ನಿರ್ಮಿಸುವ ಸಂಕಲ್ಪವನ್ನು ಮಠಾಧೀಶರು, ಹಿಂದು ಮುಖಂಡರು ಮಾಡಿದರು.

ಪಟ್ಟಣ ಹೊರವಲಯದ ಪ್ರಗತಿ ಟೌನ್‌ಶಿಪ್ ಆವರಣದಲ್ಲಿ ಶ್ರೀ ರಾಘವಚೈತನ್ಯ ಮಂದಿರ ಜೀರ್ಣೋದ್ಧಾರ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವರಾತ್ರಿ ಮಹಾಸಂಗಮ, ಶ್ರೀ ರಾಘವಚೈತನ್ಯ ಶಿವಲಿಂಗ ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂಕ್ತ ದಾಖಲೆ ಸಂಗ್ರಹಿಸಿ ಕಾನೂನು ಹೋರಾಟ ಮಾಡೋಣ ಎಂದರು.

ಶ್ರೀರಾಮ ಸೇನೆ ಗೌರವಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹಿಂದು ಜಾಗೃತನಾಗಿದ್ದು, ಸೌಮ್ಯದ ಜತೆ ಉಗ್ರ ಹಿಂದುತ್ವದ ಅಗತ್ಯವಿದೆ. ಪೂಜೆಗೆ ಅಡ್ಡಿಪಡಿಸಿದ ಬಾಬರ್‌ನ ಮೊಮ್ಮಕ್ಕಳಿಗೆ ಸಂವಿಧಾನ ಉತ್ತರ ನೀಡಿದೆ. ಮಂದಿರ ನಿರ್ಮಿಸಿ ಯೋಗಿ ಆದಿತ್ಯನಾಥರಿಂದ ಲೋಕಾರ್ಪಣೆ ಮಾಡೋಣ ಎಂದು ಹೇಳಿದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ್ ಮಾತನಾಡಿ, ಹಿಂದುಗಳಲ್ಲಿ ಒಗ್ಗಟ್ಟಿಲ್ಲ. ಶಾಂತಿ ಸಭೆ ಕರೆದರೆ ನಮ್ಮವರು ಎಂಟು ಜನ ಬರ್ತಾರೆ. ಅವರು ೧೦೦ ಜನ ಬಂದಿದ್ರು. ಲಿಂಗಕ್ಕೆ ಹೇಸಿಗೆ ಹಚ್ಚಿದ್ರು. ಧರ್ಮದ ವಿಷಯ ಬಂದಾಗ ಪಕ್ಷಭೇದ ಮರೆತು ಒಂದಾಗಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಧರ್ಮಕ್ಕಾಗಿ ಹೋರಾಡುತ್ತಿದ್ದು ರಾಜಕೀಯವಿಲ್ಲ. ಕೆಲ ವರ್ಷದ ಹಿಂದೆ ಕಿಡಿಗೇಡಿಗಳು ಶಿವಲಿಂಗ ಅಪವಿತ್ರ ಮಾಡಿದ್ದರು. ಇಲ್ಲಿನ ರಾಜಕೀಯ ವಿರೋಧಿಗಳು ಜಗಳ ಹಚ್ಚಿ ನಂತರ ಮರೆತಿದ್ದಾರೆ ಎಂದು ಕಿಡಿಕಾರಿದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯ, ಶಾಸಕ ಡಾ.ಅವಿನಾಶ ಜಾಧವ್, ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿದರು.

ಸಾಮೂಹಿಕ ಶಿವಪೂಜೆಯಲ್ಲಿ ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡೆ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ್, ಮಲ್ಲು ತಡಕಲ್, ಸಚಿನ್ ಕಡಗಂಚಿ, ಮಹೇಶ ಗೌಳಿ, ವೀರಣ್ಣ ಮಂಗಾಣೆ ಕಡಗಂಚಿ, ಮಲ್ಲಿಕಾರ್ಜುನ ಕಂದಗುಳೆ, ವಿಠ್ಠಲರಾವ ಪಾಟೀಲ್, ಆನಂದರಾವ ಪಾಟೀಲ್ ಕೊರಳ್ಳಿ, ಈರಣ್ಣ ಆಳಂದ ಸೇರಿ ೨೦೦೦ಕ್ಕೂ ಅಧಿಕ ಹಿಂದುಗಳು ಭಾಗವಹಿಸಿದ್ದರು. ಹಣಮಂತ ಶೇರಿ ನಿರೂಪಣೆ ಮಾಡಿದರು.

ಹೋರಾಡದಿದ್ರೆ ದೇವಸ್ಥಾನಕ್ಕೆ ಬರ್ತಾರೆ ಹುಷಾರ್: ಅಬುಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ದೇವಸ್ಥಾನ ಪೂಜೆ ಮಾಡಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಕೋರ್ಟ್ಗೆ ಹೋಗುವ ಸ್ಥಿತಿ ಬಂದಿದೆ. ನಾವು ರಾಘವಚೈತನ್ಯ ಮಂದಿರಕ್ಕಾಗಿ ಹೋರಾಡದಿದ್ದರೆ ನಾಳೆ ದೇವಸ್ಥಾನದ ಒಳಗೆ ಬರುತ್ತಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net