ಕಾಲೇಜಿನಲ್ಲಿ ನಡೆಯುವ ರ‌್ಯಾಗಿಂಗ್ ಕೂಡ ಅಪರಾಧ

MDK06
Published on

ಮಡಿಕೇರಿ: ಕಾಲೇಜಿನಲ್ಲಿ ನಡೆಯುವ ರ‌್ಯಾಗಿಂಗ್ ಕೂಡ ಅಪರಾಧವಾಗಿದ್ದು, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ರ‌್ಯಾಗಿಂಗ್ ಮಾಡಬಾರದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕಿವಿಮಾತು ಹೇಳಿದರು.


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ರ‌್ಯಾಗಿಂಗ್ ತಡೆಗಟ್ಟುವ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ವೈದ್ಯಕೀಯ ಕಾಲೇಜಿಗೆ ಇತರೆ ಜಿಲ್ಲೆ ಅಲ್ಲದೇ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರ‌್ಯಾಗಿಂಗ್ ಮಾಡಬಾರದು. ರ‌್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ ದಂಡ ಕೂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.


ರ‌್ಯಾಗಿಂಗ್‌ನಿಂದಾಗಿ ವಿದ್ಯಾರ್ಥಿಯ ಮೇಲೆ ಮಾನಸಿಕ ಮತ್ತು ದೈಹಿಕ ಪರಿಣಾಮಗಳು ಉಂಟಾಗುತ್ತದೆ. ಜತೆಗೆ ಆತಂಕ, ಖಿನ್ನತೆ ಮತ್ತು ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಕಾರಣವಾಗಬಹುದು. ಕೆಲವು ಒತ್ತಡ ಮತ್ತು ಆಘಾತವು ಸುಮಾರು ವರ್ಷಗಳವರೆಗೂ ಕಾಡಬಹುದು. ರ‌್ಯಾಗಿಂಗ್‌ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ವಿದ್ಯಾರ್ಥಿಯು ಅಧ್ಯಯನದ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಶೈಕ್ಷಣಿಕವಾಗಿ ಕಳಪೆ ಸಾಧನೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಯ ಭವಿಷ್ಯದ ಆಕಾಂಕ್ಷೆಗಳ ಮೇಲೆ ಪರಿಣಾಮಗಳನ್ನು ಉಂಟುಮಾಡುವುದರ ಜತೆಗೆ ಕಾಲೇಜಿನ ಹೆಸರಿಗೂ ಕೂಡ ಧಕ್ಕೆ ತರಲಿದೆ. ಪರಿಣಾಮ ಯಾವುದೇ ವಿದ್ಯಾರ್ಥಿಗಳು ಕೂಡ ರ‌್ಯಾಗಿಂಗ್ ಮಾಡಬಾರದು ಎಂದು ಕಿವಿಮಾತು ಹೇಳಿದರು.


ರ‌್ಯಾಗಿಂಗ್‌ನಿಂದಾಗಿ ಕಾಲೇಜಿನ ಕ್ಯಾಂಪಸ್ ಸಂಸ್ಕೃತಿಗೆ ಧಕ್ಕೆತರಲಿದೆ. ಕಲಿಕೆ ಮತ್ತು ವೈಯುಕ್ತಿಕ ಬೆಳವಣಿಗೆಗಿಂತ ಭಯ, ಬೆದರಿಕೆ ಮತ್ತು ಬೆದರಿಸುವಿಕೆಯ ವಾತಾವರಣವನ್ನು ಬೆಳೆಸುತ್ತದೆ. ನೂತನವಾಗಿ ಆಗಮಿಸುವ ಕಿರಿಯ ವೈದ್ಯ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಕಾರ್ಯಕ್ರಮ ಸಂಘಟಿಸಿ, ಕಾಲೇಜಿನ ವಾತವಾರಣದಲ್ಲಿ ಹಿರಿಯರು ಮತ್ತು ಕಿರಿಯರು ಒಟ್ಟಾಗಿ ಬೆರೆಯುವಂತ ವಾತವಾರಣ ನಿರ್ಮಾಣ ಮಾಡಬೇಕೆಂದು ತಿಳಿಸಿದರು.


ಸಂಸ್ಥೆಯ ಆಂತರಿಕ ರ‌್ಯಾಗಿಂಗ್ ವಿರೋಧಿ ತಂಡ ರಚನೆ, ಸಿಸಿ ಕ್ಯಾಮರಾ ಅಳವಡಿಕೆ ಕುರಿತು ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್‌ರವರಿಂದ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ರ‌್ಯಾಗಿಂಗ್ ಸಂಭವಿಸಿದಲ್ಲಿ ಕಾಲೇಜು ವತಿಯಿಂದ ತೆಗೆದುಕೊಳ್ಳಬೇಕಾದ ಶಿಸ್ತು ಕ್ರಮ ಮತ್ತು ಪೋಲಿಸ್ ಇಲಾಖೆಯಿಂದ ಕೈಗೊಳ್ಳುವ ಕ್ರಮದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.


ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್‌ರವರು ವಿದ್ಯಾರ್ಥಿಗಳಿಗೆ ಯಾವುದೇ ರ‌್ಯಾಗಿಂಗ್ ಚಟುವಟಿಕೆಗಳಲ್ಲಿ ತೊಡಗುವುದಿಲ್ಲವೆಂದು ಪ್ರಮಾಣವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರ‌್ಯಾಗಿಂಗ್ ಕೃತ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಕೆ.ಬಿಕಾರ್ಯಪ್ಪ, ಮುಖ್ಯ ಆಡಳಿತಾಧಿಕಾರಿ ಸ್ವಾಮಿ, ಸಂಸ್ಥೆಯ ರ‌್ಯಾಗಿಂಗ್ ವಿರೋಧಿ ಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ್‌ಬಾಬು, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ರವಿಕಿರಣ ಕಿಸಾನ್, ನರ್ಸಿಂಗ್ ಪ್ರಾಂಶುಪಾಲರಾದ ಮಂಜುಳ, ಸೇರಿದಂತೆ ಬೋಧಕ ವರ್ಗದವರು ಮತ್ತು ಎಂಬಿಬಿಎಸ್, ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net