

ಬೆಂಗಳೂರು: ರಂಗಸ್ಥಳ ಯಕ್ಷಮಿತ್ರಕೂಟ (ರಿ.) ಇವರಿಂದ ನಾಳೆ ಜುಲೈ 31ರಂದು 2022ನೇ ಸಾಲಿನ ರಂಗಸ್ಥಳ ಪ್ರಶಸ್ತಿ ಪ್ರದಾನ ಮತ್ತು ದತ್ತಿ ಪ್ರಶಸ್ತಿಗಳ ಪ್ರದಾನ ನಡೆಯಲಿದ್ದು, ಜತೆಗೆ ಯಕ್ಷಗಾನ ಪ್ರದರ್ಶನವೂ ಇರಲಿದೆ. ಭಾನುವಾರ ಮಧ್ಯಾಹ್ನ 2ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮುಂಭಾಗದ ಎಡಿಎ ರಂಗಮಂದಿರಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ, ವಿಜಯವಾಣಿ ಪತ್ರಿಕೆಯ ಸುದ್ದಿ ಸಂಪಾದಕ ರಾಜಶೇಖರ ಜೋಗಿನ್ಮನೆ, ಉದ್ಯಮಿಗಳಾದ ಡಾ. ಬಾಬು ಗೋವಿಂದ ಪೂಜಾರಿ, ನಿತಿನ್ ನಾರಾಯಣ, ಹರೀಶ ಕೃಷ್ಣಮೂರ್ತಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನದ ಜತೆಗೆ ಮಾಸಾಶನ ಚೆಕ್ ವಿತರಣೆ ಕೂಡ ಇರಲಿದೆ.
ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿದ್ದು, ಅದಕ್ಕೂ ಮುನ್ನ ಅಂದರೆ ಮಧ್ಯಾಹ್ನ 2 ಗಂಟೆಗೆ ಹಟ್ಟಿಯಂಗಡಿ ರಾಮ ಭಟ್ ವಿರಚಿತ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಇರಲಿದೆ. ಸಂಜೆ 6 ಗಂಟೆಗೆ ಹೆರಂಜಾಲು ಯಕ್ಷ ಬಳಗ ಮತ್ತು ಟೀಮ್ ಉತ್ಸಾಹಿ ಬಳಗದವರಿಂದ ಅಜಪುರ ವಿಷ್ಣು ವಿರಚಿತ ಕೀಚಕ ವಧೆ ಯಕ್ಷನಾಗ ಪ್ರದರ್ಶನ ಇರಲಿದೆ.