ರಿವರ್ ರ‍್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

12mdk08
Published on

ಮಡಿಕೇರಿ:
ರಿವರ್ ರ‍್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರು ದುಬಾರೆ, ಬರಪೊಳೆ, ಕುಮಾರಳ್ಳಿ, ಮಾಂದಲ್‌ಪಟ್ಟಿ, ಅಬ್ಬಿ ಜಲಪಾತ, ರಾಜಾಸೀಟು ಹೀಗೆ ವಿವಿಧ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಯಾವುದೇ ರೀತಿಯ ಕಹಿ ಘಟನೆ ಉಂಟಾಗದಂತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಇಡೀ ಕೊಡಗು ಜಿಲ್ಲೆಗೆ ಕೆಟ್ಟ ಹೆಸರು ಬರಲಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ತೊಂದರೆಯಾಗಲಿದೆ. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಜತೆಗೆ ಸೌಜನ್ಯ, ವಿನಯ, ವಿನಮ್ರತೆಯಿಂದ ನಡೆದುಕೊಳ್ಳಬೇಕು. ರಿವರ್ ರ‍್ಯಾಪ್ಟಿಂಗ್ ಸಂಬಂಧಿಸಿದಂತೆ ಪರವಾನಿಗೆ ನೀಡುವುದು, ಪರವಾನಿಗೆ ನವೀಕರಣ ಮಾಡುವುದು ಈ ಎಲ್ಲಾ ಕಾರ್ಯಗಳನ್ನು ನಿಯಮಾನುಸಾರ ಮಾಡಲಾಗುವುದು.

ರಿವರ್ ರ‍್ಯಾಪ್ಟಿಂಗ್ ಸಂಬಂಧಿಸಿದಂತೆ ಈಗಾಗಲೇ ನಿಗದಿ ಮಾಡಿರುವ ದರದಂತೆ ಮುಂದುವರೆಸಬೇಕು ಎಂದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಇತ್ತೀಚೆಗೆ ಅಬ್ಬಿಜಲಪಾತ ಬಳಿ ಪ್ರವಾಸಿಗರೊಂದಿಗೆ ಕೆಲವರು ಅನುಚಿತವಾಗಿ ನಡೆದುಕೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿತ್ತು, ಇಂತಹ ಅಹಿತಕರ ಘಟನೆಗಳು ನಡೆಯಬಾರದು. ನಡೆದಲ್ಲಿ ಪೊಲೀಸ್ ಇಲಾಖೆ ನಿಯಮಾನುಸಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ದುಬಾರೆಯ ರತೀಶ್ ಮಾತನಾಡಿ ರಿವರ್ ರ‌್ಯಾಪ್ಟಿಂಗ್ ಅನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಿಕೊಂಡು ಹೋಗಲಾಗುತ್ತದೆ. ೭೩ ರಿವರ್ ರ‌್ಯಾಪ್ಟ್ ಕಾರ್ಯ ಚಟುವಟಿಕೆಗಳು ನಡೆಸುತ್ತಿವೆ. ದುಬಾರೆಗೆ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾಹನ ಪಾರ್ಕಿಂಗ್ ವ್ಯವಸ್ಥೆ ಆಗಬೇಕಿದೆ ಎಂದರು. ರತನ್ ಮಾತನಾಡಿ ಬರಪೊಳೆಯಲ್ಲಿ ಅಗತ್ಯ ಮೂಲ ಸೌಲಭ್ಯ ಹೆಚ್ಚಿಸಬೇಕೆಂದು ಮನವಿ ಮಾಡಿದರು.
ರಿವರ್ ರ‌್ಯಾಪ್ಟಿಂಗ್ ನಡೆಸುವ ನಿಟ್ಟಿನಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ(ಜೇತ್ನ) ಮುಖ್ಯ ಪ್ರಶಿಕ್ಷಕ ದಿನೇಶ್ ಹೇಳಿದರು.

ನಂಜರಾಯಪಟ್ಟಣ ಪಿಡಿಒ ಅವರು ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡುವಂತಾಗಬೇಕು ಎಂದು ಕೋರಿದರು.
ಹೋಟೆಲ್, ರೆಸಾರ್ಟ್ ಅಸೋಷಿಯೇಷನ್ ಅವರ ಜೊತೆ ಚರ್ಚೆ : ಬಳಿಕ ಹೋಟೆಲ್, ರೆಸಾರ್ಟ್ ಅಸೋಷಿಯೇಷನ್ ಜತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಎಲ್ಲಾ ಹೋಂ ಸ್ಟೇ ರೆಸಾರ್ಟ್‌ಗಳ ಮಾಹಿತಿ ಒಂದೆಡೆ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಲಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ರೆಸಾರ್ಟ್‌ಗಳು ಅನಧಿಕೃತ ಚಟುವಟಿಕೆಯಲ್ಲಿ ನಡೆಯದಂತೆ ಗಮನಹರಿಸಬೇಕು. ಇಂತಹ ಘಟನೆಗಳು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೋಂ ಸ್ಟೇ ಅಸೋಷಿಯೇಷನ್‌ನ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ ಜಿಲ್ಲೆಯಲ್ಲಿ ೨೦೦ ಕ್ಕೂ ಹೆಚ್ಚು ನೋಂದಾಯಿತ ಹೋಂ ಸ್ಟೇಗಳಿದ್ದು, ಹೋಂ ಸ್ಟೇ ನೋಂದಣಿ ಸರಳೀಕರಣ ಮಾಡಬೇಕು. ಇದರಿಂದ ಹೆಚ್ಚಿನ ಜನರು ನೋಂದಣಿ ಮಾಡಲು ಸಹಕಾರಿಯಾಗಲಿದೆ ಎಂದರು.
ಹೋಟೆಲ್ ಅಸೋಷಿಯೇಷನ್‌ನ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ ಪ್ರವಾಸಿ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವಾರಾಂತ್ಯದಲ್ಲಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಅಬಕಾರಿಯಿಂದ ಹೆಚ್ಚಿನ ಆದಾಯ ಬರುತ್ತಿದ್ದು, ಪ್ರವಾಸಿ ಸ್ಥಳಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಅವರು ಮಾತನಾಡಿ ಪ್ರವಾಸಿಗರು ಎಲ್ಲೆಂದರಲ್ಲಿ ಅಡುಗೆ ಮಾಡುತ್ತಾರೆ. ಇದರಿಂದಾಗಿ ಅಡುಗೆ ಮಾಡಲು ಸ್ಥಳ ನಿಗದಿ ಮಾಡಬೇಕು ಎಂದು ಕೋರಿದರು. ಕೊಡಗು ಬ್ರಾಂಡೆಡ್ ಹೆಸರಿನಲ್ಲಿ ಜೇನು, ವೈನ್, ಸಾಂಬಾರು ಪದಾರ್ಥಗಳು ನಕಲಿಯಾಗಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ಮಾಡಿದರು. ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್ ಅವರು ಕೋಟೆಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಯಾವುದೇ ಸೂಚನಾ ಫಲಕ ಇಲ್ಲ. ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸುವಂತಾಗಬೇಕು ಎಂದರು.
ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಅಸೋಷಿಯೇಷನ್ ನಿಕಟಪೂರ್ವ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಅಭಿನಂದನ್, ಉಪಾಧ್ಯಕ್ಷ ಯೋಗೇಶ್, ಖಜಾಂಚಿ ಪ್ರೀತಂ, ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಚಂದನ್, ಪಿ.ಸಿ.ವಸಂತ, ಸಿ.ಎಸ್.ರತನ್, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕ ಜತೀನ್, ಕುಮಾರಧಾರದ ಪ್ರದೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net