ಜಿಲ್ಲೆಯಲ್ಲಿ ರೇಡಿಯೋ ಪರಿಣಾಮಕಾರಿ ಮಾಧ್ಯಮ;ಶಬನಾ.ಎಂ.ಶೇಕ್

16adarshkdga3
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರೇಡಿಯೋ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಕೃಷಿ ನಿರ್ದೇಶಕಿ ಶಬನಾ.ಎಂ.ಶೇಕ್ ಹೇಳಿದರು.


ಮಡಿಕೇರಿ ಆಕಾಶವಾಣಿ ಕೇಂದ್ರವು ಹಮ್ಮಿಕೊಂಡಿದ್ದ ರೇಡಿಯೋ ಕಿಸಾನ್ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಕೃಷಿ ಪ್ರಧಾನವಾದ ಈ ಜಿಲ್ಲೆಯಲ್ಲಿ ಕೃಷಿಕರಿಗೆ ಉಪಯುಕ್ತವಾದ ವಿಚಾರಗಳು ಪ್ರಸಾರವಾಗುತ್ತಿದ್ದು, ಕೃಷಿ ಇಲಾಖೆಯ ಯೋಜನೆಗಳ ಮಾಹಿತಿ ತಿಳಿಸಲು ಅನುಕೂಲವಾಗಿದೆ. ಇತರೇ ಜಿಲ್ಲೆಗಳಿಗಿಂತ ಕೊಡಗಿನ ಪರಿಸರ ಭಿನ್ನವಾಗಿದೆ. ಇಲ್ಲಿಯೂ ಸಾಧಕ ರೈತರು ಇದ್ದಾರೆ. ಕೃಷಿ ಇಲಾಖೆಯು ಹಾಲಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡುತ್ತಿದ್ದು ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಗೆ ರೈತರು ಹೆಸರು ನೋಂದಾಯಿಸಿಕೊಂಡು ಪ್ರಯೋಜನ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.


ಕೊಡಗು ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನೂರಾರು ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಇದೆ. ರೈತರ ಹತ್ತಾರು ಕೆಲಸಗಳಿಗೆ ಈ ಮೂಲಕ ಸಹಾಯವಾಗಲಿದೆ ಎಂದರು.


ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಿಜಯ್ ಅಂಗಡಿ ಮಾತನಾಡಿ, ೧೯೬೫ ರಿಂದ ಕೃಷಿ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿವೆ. ರೈತರಿಗೆ ಪ್ರತೀ ದಿನವೂ ಕೃಷಿ ಕುರಿತ ಮಾಹಿತಿಯನ್ನು ನೀಡಲಾಗುತ್ತಿದೆ. ೨೦೦೪ರ ಫೆ.೧೫ ರಂದು ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಕೃಷಿ ಕಾರ್ಯಕ್ರಮಗಳ ಪ್ರಸಾರವು ನೆಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ ೧೫ ರಂದು ರೇಡಿಯೋ ’ರೈತ ದಿನ’ ಆಚರಿಸಲಾಗುತ್ತಿದೆ. ದೇಶದಲ್ಲಿ ೯೬ ಆಕಾಶವಾಣಿ ಕೇಂದ್ರಗಳಿಂದ ಕಿಸಾನ್ ವಾಣಿ ಪ್ರಾಯೋಜಿತ ಕಾರ್ಯಕ್ರಮಗಳು ಮೂಡಿಬರುತ್ತಿವೆ. ರೈತರಿಗೆ ಹತ್ತಾರು ಸಂಗತಿಗಳು ಸಿಗುವಂತಾಗಲು ಪ್ರಸಾರದ ಸಂಯೋಜನೆ ಮಾಡಲಾಗಿದೆ. ರೈತರಿಗೆ ರೇಡಿಯೋ ಈಗಲೂ ನೆಚ್ಚಿನ ಮಧ್ಯಮವಾಗಿದೆ ಎಂದು ತಿಳಿಸಿದರು.


ರೇಡಿಯೋ ಕಿಸಾನ್ ದಿವಸದ ನಿಮಿತ್ತ ಎಂ.ಬಾಡಗ ಗ್ರಾಮದ ಬಾರಿಯಂಡ ಸಂಜನ್ ಪೊನ್ನಪ್ಪ, ಮೈತಾಡಿಯ ಎಚ್.ಕೆ ಹನೀಫ್, ಚೇರಂಗಾಲದ ಮೂಲೆಮಜಲು ಗಣೇಶ್ ಹಾಗೂ ಗರಂಗದೂರಿನ ಕೆ.ಎಸ್.ಮಂಜುನಾಥ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ರೈತರಿಗೆ ಚಕ್ರಮುನಿ, ಲೆಮನ್ ಗ್ರಾಸ್, ಪೆಪ್ಪರ್ ಮಿಂಟ್, ಪಟಾವಳಿ ಕಬ್ಬಿನ ಗಿಡಗಳನ್ನೂ ಕಾಣಿಕೆಯಾಗಿ ಕೊಡಲಾಯಿತು.


ರೈತ ಹನೀಫ್ ಮಾತನಾಡಿ, ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮಗಳು ನಮ್ಮ ಜೀವನವನ್ನು ಬದಲಿಸುತ್ತವೆ. ಸ್ಫೂರ್ತಿ ನೀಡುತ್ತವೆ ಎಂದರು.


ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಆಕಾಶವಾಣಿಯಿಂದ ಕೃಷಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳು ಭಿತ್ತರವಾಗುತ್ತಿದ್ದು, ಮಾಹಿತಿ ಪಡೆದು ಉತ್ತಮ ಬೆಳೆ ಬೆಳೆಯುವಂತಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಆಕಾಶವಾಣಿಯ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ, ಆನಂದನ್, ಶಿವಾನಂದನ್, ಪಂಕಜ್ ಕುಡ್ತರ್‌ಕರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net