

ಯಲ್ಲಾಪುರ: ಒಂದು ವಿಷಯವನ್ನು ಕೇವಲ ಮಾಹಿತಿಯಾಗಿಸದೇ ಸಂವೇದನೆಯಾಗಿ ರೂಪಿಸುವ ಶಕ್ತಿ ರೇಡಿಯೋಕ್ಕಿದೆ ಎಂದು ಆಕಾಶವಾಣಿ ನಿವೃತ್ತ ಅಧಿಕಾರಿ ಹಾಗೂ ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರೇಡಿಯೊ: ಅಂದು- ಇಂದು-ಮುಂದು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಂವೇದನಶೀಲವಾಗಿ ಕೇಳುವ ಸಂಸ್ಕಾರವನ್ನು ರೇಡಿಯೋ ಕಲಿಸುತ್ತದೆ. ಕಲ್ಪನೆಯನ್ನು ವಿಸ್ತರಿಸುವ ಗುಣ ಕೇಳುವಿಕೆಗಿದೆ. ಇದು ರೇಡಿಯೋದ ವಿಶೇಷತೆ. ರೇಡಿಯೋದಲ್ಲಿ ಮಾತು, ರೂಪಕ, ಸಂಗೀತಗಳಿಂದ ಮಾತ್ರ ಕೇಳುಗರನ್ನು ಪರಿಣಾಮಕಾರಿಯಾಗಿ ತಲುಪಬಹುದು. ಅದಕ್ಕೆ ಬೇಕಾದ ಕ್ರಿಯಾಶೀಲತೆ, ಅಧ್ಯಯನ, ಪರಿಶ್ರಮ ನಮ್ಮದಾಗಿರಬೇಕು ಎಂದರು.
ಸರ್ಕಾರ ಹೊಸದಾಗಿ ಎಫ್‌ಎಂ ಕೇಂದ್ರಗಳನ್ನು ತೆರೆಯಲು ಮುಂದಾಗುತ್ತಿದೆ. ರೇಡಿಯೋ ಕೇಳುಗರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ಉದಾಹರಣೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಉಪಯುಕ್ತ ವಿಷಯಗಳನ್ನು ಅಧ್ಯಯನ ಪೂರ್ಣವಾಗಿ ಪ್ರಸ್ತುತಪಡಿಸಿದಾಗ ಜನರು ಉತ್ತಮವಾಗಿ ಸ್ವೀಕರಿಸುತ್ತಾರೆ. ಆ ನಿಟ್ಟಿನಲ್ಲಿ ಕಮ್ಯೂನಿಟಿ ರೇಡಿಯೋಗಳು ಕಾರ್ಯನಿರ್ವಹಿಸುತ್ತಿವೆ. ಅದು ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ಖಾಸಗಿ ರೇಡಿಯೋಗಳ ಸಂಖ್ಯೆ ಹೆಚ್ಚಾಗಿದ್ದರೂ ಗುಣಮಟ್ಟದ ವಿಷಯಗಳನ್ನು ನೀಡುವಲ್ಲಿ ವಿಫಲವಾಗುತ್ತಿದ್ದಾರೆ. ಇದಕ್ಕೆ ಅಧ್ಯಯನದ ಕೊರತೆ ಪ್ರಮುಖ ಕಾರಣ ಎಂದರು. ರೇಡಿಯೋ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ದಿವಾಕರ ಹೆಗಡೆ ಸಂವಾದ ನಡೆಸಿದರು.
ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ, ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶೋಭಾ ಹಾಗೂ ವಿದ್ಯಾ ಪ್ರಾರ್ಥಿಸಿದರು. ಮೇಘನಾ ಆಚಾರಿ ನಿರ್ವಹಿಸಿದರು. ನಾಗರಾಜ ಪಟಗಾರ ವಂದಿಸಿದರು.