ಇ- ಕಾಮರ್ಸ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ

Radical change in the e-commerce sector
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಡಾ. ಜಯಪ್ರಸಾದ ಡಿ. ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಂ.ಎಸ್. ಖೊದ್ನಾಪೂರ, ಆಶಾ ಹಜೇರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸದ್ಯದ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇ-ಕಾಮರ್ಸ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿವೆ. ಅದರಿಂದ ಗ್ರಾಹಕರು ತಮ್ಮ ಬೇಕು-ಬೇಡ, ಅಪೇಕ್ಷೆ-ಆಕಾಂಕ್ಷೆ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಸರಕು-ಸೇವೆಗಳನ್ನು ಮನೆಯಿಂದಲೇ ಪಡೆಯುತ್ತಿದ್ದಾರೆ ಎಂದು ಇಂಡಿ ಜಿಆರ್‌ಜಿ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಜಯಪ್ರಸಾದ ಡಿ. ಹೇಳಿದರು.

ನಗರದ ನವಭಾಗದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ಕ್ಷೇತ್ರದಲ್ಲಿನ ಇತ್ತೀಚಿನ ವಿದ್ಯಮಾನಗಳು ವಿಷಯ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಭಾರತದ ಗ್ರಾಹಕ ಮಾರುಕಟ್ಟೆ ಅತಿ ದೊಡ್ಡದಾಗಿದೆ. ವಿಶ್ವದಲ್ಲೇ ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರಲ್ಲಿ ಭಾರತ ಎರಡನೇ ರಾಷ್ಟ್ರವಾಗಿದೆ. ಸದ್ಯದ ವಾಣಿಜ್ಯ-ವ್ಯವಹಾರ, ಖರೀದಿ-ಮಾರಾಟ ಮತ್ತು ಮಾರಾಟ ಚಟುವಟಿಕೆಯಲ್ಲಿ ಶೇ. 35 ರಷ್ಟು ಜನರು ಆನಲೈನ್ ಶಾಪಿಂಗ್ ಆಧಾರಿತವಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಸಾಂಪ್ರದಾಯಿಕ ಮಾರಾಟ ಪ್ರಕ್ರಿಯೆ ಪರಿಸರದಲ್ಲಿ ಗ್ರಾಹಕರು ಮಳಿಗೆ-ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವ ಗೋಜು ಇಲ್ಲದಂತಾಗಿದೆ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್. ಖೊದ್ನಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ಕಾರ್ಪೋರೇಟ್ ಜಗತ್ತು ವಿಶೇಷವಾಗಿ ತಂತ್ರಜ್ಞಾನ, ಕೌಶಲ, ನೈಪುಣ್ಯತೆ ಮತ್ತು ಬುದ್ಧಿಮತ್ತೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಬದಲಾವಣೆಯತ್ತ ಸಾಗುತ್ತಿರುವ ವಾಣಿಜ್ಯ ಮತ್ತು ಮ್ಯಾನೇಜಮೆಂಟ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಆರ್.ಎಸ್. ಕುರಿ, ವಾಣಿಜ್ಯಶಾಸ್ತ್ರ ವಿಭಾಗದ ಐ.ಎಸ್. ಶಿವಶರಣರ, ಆರ್.ಐ. ಜೋಗೂರ, ವಲ್ಲಭ ಕಬಾಡೆ, ಆಶಾ ಹಜೇರಿ, ಎಸ್.ಡಿ. ಬಿರಾದಾರ ಮತ್ತಿತರರಿದ್ದರು.

ಸೃಷ್ಠಿ ಗೋಂದಳಿ ಪ್ರಾರ್ಥಿಸಿದರು. ಎಂ.ಎಸ್. ಖೊದ್ನಾಪೂರ ಸ್ವಾಗತಿಸಿದರು. ವಲ್ಲಭ ಕಬಾಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net