ವೈದ್ಯಕೀಯ ಕ್ಷೇತ್ರದಲ್ಲಿ ವಿಕಿರಣ ಮಾನ್ಯತೆ ನೋಂದಣಿ ಅಗತ್ಯ

mng-jam-29-VV
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಐಎಆರ್‌ಪಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 35ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನವನ್ನು ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ಡಿ ಕೆ ಶುಕ್ಲಾ ಉದ್ಘಾಟಿಸಿದರು.
Published on

ಮಂಗಳೂರು: ವಿಕಿರಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವರು, ಸಂಶೋಧಕರು ವೈದ್ಯಕೀಯ ಕ್ಷೇತ್ರದಲ್ಲಿ ವಿಕಿರಣ ಮಾನ್ಯತೆಗಾಗಿ ರಾಷ್ಟೀಯ ನೋಂದಣಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಅಧ್ಯಕ್ಷ ಡಿ ಕೆ ಶುಕ್ಲಾ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಅಸೋಸಿಯೇಷನ್ ಫಾರ್ ರೇಡಿಯೇಷನ್ ಪ್ರೊಟೆಕ್ಷನ್ (ಐಎಆರ್‌ಪಿ) ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸುಸ್ಥಿರ ಪರಮಾಣು ಶಕ್ತಿಗಾಗಿ ವಿಕಿರಣ ರಕ್ಷಣೆ: ಹವಾಮಾನ ಮತ್ತು ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ಕುರಿತು 35 ನೇ ಐಎಆರ್‌ಪಿ ರಾಷ್ಟ್ರೀಯ ಸಮ್ಮೇಳನದದಲ್ಲಿ ಮಾತನಾಡಿದರು.

ಪರಮಾಣು ಸ್ಥಾವರಗಳಲ್ಲಿ ಕೆಲಸ ಮಾಡುವ ಔದ್ಯೋಗಿಕ ಕೆಲಸಗಾರರಿಗೆ, ವೈದ್ಯಕೀಯ ಕ್ಷೇತ್ರದ ಸಿಟಿ ಯಂತ್ರ, ಎಕ್ಸ್ ರೇ ಮತ್ತು ಇತರ ಕಾರ್ಯ ನಿರ್ವಹಿಸುವವರಿಗೆ ವಿಕಿರಣ ಮಾನ್ಯತೆ ಡೋಸ್ ಮಿತಿ ಇದ್ದು, ಮಾನ್ಯತೆ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಆಕ್ಯುಪೇಷನಲ್ ಡೋಸ್ ರಿಜಿಸ್ಟ್ರಿ ಸಿಸ್ಟಮ್ (ಎನ್‌ಒಡಿಆರ್‌ಎಸ್) ಸಂಸ್ಥೆ ವಿಕಿರಣ ಪ್ಲಾಂಟ್‌ನ ಕಾರ್ಮಿಕರ ವಾರ್ಷಿಕ ಮತ್ತು ಜೀವಿತಾವಧಿಯ ಡೋಸ್ ಡೇಟಾವನ್ನು ನಿರ್ವಹಿಸುತ್ತಿದೆ. ಆದರೆ ವೈದ್ಯಕೀಯ ಕ್ಷೇತ್ರದ ಎಕ್ಸ್ ರೇ, ಸಿಟಿ ಸ್ಕ್ಯಾನ್‌ನಲ್ಲಿನಲ್ಲಿ ವಿಕಿರಣಕ್ಕೆ ಒಡ್ಡಿಕೊಳ್ಳುವ ಸಮಸ್ಯೆ ಇದೆ. ಇದನ್ನು ನಿಯಂತ್ರಿಸುವ ಹಾಗೂ ಸಂಯೋಜಿಸುವ ವ್ಯವಸ್ಥೆ ಇಲ್ಲ. ಒಬ್ಬ ರೋಗಿಯು ವೈದ್ಯರನ್ನು ಸಂಪರ್ಕಿಸಿದಾಗ ಸ್ಕ್ಯಾನ್‌ಗಳ ಮೂಲಕ ಈಗಾಗಲೇ ಪಡೆದ ವಿಕಿರಣದ ಪ್ರಮಾಣ ಎಷ್ಟು ಎಂದು ಆ ವೈದ್ಯರು ಹೇಗೆ ತಿಳಿಯುತ್ತಾರೆ?. ಈಬಗ್ಗೆ ಪರಮಾಣು ಶಕ್ತಿ ಇಲಾಖೆ ಮತ್ತು ಆರೋಗ್ಯ ಸಚಿವಾಲಯದ ಮೂಲಕ ಸರ್ಕಾರಕ್ಕೆ ಶಿಫಾರಸು ಯಾವ ರೀತಿಯ ಕಾನೂನು ಚೌಕಟ್ಟು ರಚಿಸಬಹುದೆಂಬುವುದನ್ನು ಈ ಸಮ್ಮೇಳನದಲ್ಲಿ ನಿರ್ಧರಿಸಬೇಕು ಎಂದರು.

ಕೈಗಾ ಜನರೇಟಿಂಗ್ ಸ್ಟೇಷನ್ ಸೈಟ್ ನಿರ್ದೇಶಕ ಬಿ ವಿನೋದ್ ಕುಮಾರ್ ಮಾತನಾಡಿ, ಅಭಿವೃದ್ದಿ ಹೊಂದಿದ ಭಾರತದಲ್ಲಿ 8,180 ಮೆಗವ್ಯಾಟ್ ಸಾಮರ್ಥ್ಯದ 24 ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದೆ. 8,700 ಮೆಗಾವ್ಯಾಟ್ ಸಾಮರ್ಥ್ಯದ ಹೆಚ್ಚುವರಿ 11 ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿದ್ದು, ಪರಮಾಣು ಶಕ್ತಿಯ ಮೂಲಕ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಿಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ ಇಂತಹ ಯೋಜನೆಗಳು ಇಂಧನ ಸ್ಥಾವರಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ದೊಡ್ಡ ಪ್ರಮಾಣದ ಶಕ್ತಿ ಹಾಗೂ ವಿದ್ಯುತ್ ಉತ್ಪಾದನೆಗೆ ಸಹಾಯವಾಗಲಿದೆ. ಜಾಗತಿಕವಾಗಿ ನಡೆಯುವ ನೆಟ್ ಝೀರೋ ನ್ಯೂಕ್ಲಿಯರ್(ಎನ್‌ಝಡ್‌ಎನ್)ಯೋಜನಾ ಉಪಕ್ರಮವು 2050ರ ವೇಳೆಗೆ ಜಾಗತಿಕ ಪರಮಾಣು ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.

ಬೆಂಗಳೂರು ವಿವಿ ಮಾಜಿ ಕುಲಪತಿ ಪ್ರೊ.ಕೆ.ಸಿದ್ದಪ್ಪ, ಯೆನೆಪೊಯ ವಿವಿ ಕುಲಪತಿ ಪ್ರೊ.ಎಂ.ವಿಜಯ್‌ಕುಮಾರ್, ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮತ್ತಿತರರು ಉಪಸ್ಥಿತರಿದ್ದರು.

--------------------

ಪರಮಾಣು ಶಕ್ತಿಯ ಯೋಗ್ಯ ಬಳಕೆಯಿಂದ ಭಾರತದ ಪರಮಾಣು ಶಕ್ತಿ ಕ್ಷೇತ್ರವು ವಾರ್ಷಿಕವಾಗಿ 41 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿದೆ. 2070ರ ವೇಳೆಗೆ ಭಾರತದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಶೂನ್ಯ ಗುರಿಯನ್ನು ಸಾಧಿಸಲು ಭಾರತ ಬದ್ಧವಾಗಿದೆ. ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಪೂರೈಸಲು ಭಾರತೀಯ ಪರಮಾಣು ಶಕ್ತಿ ಕಾರ್ಯಕ್ರಮದ ಬೆಳವಣಿಗೆ ಮಹತ್ವ ಪಡೆದಿದೆ.

-ಬಿ ವಿನೋದ್ ಕುಮಾರ್, ನಿರ್ದೇಶಕ

ಜನರೇಟಿಂಗ್ ಸ್ಟೇಷನ್ ಸೈಟ್, ಕೈಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net