

ಬಾಗಲಕೋಟೆ: ಕಾಂಗ್ರೆಸ್ನ ಯುವ ರಾಜ ರಾಹುಲ್ ಗಾಂಧಿ ಭಾನುವಾರ ಬಸವ ಜಯಂತಿಯ ವಿಶೇಷ ದಿನವನ್ನು ಭಾಗಶಃ ಬಸವಣ್ಣನ ವಿದ್ಯಾಭೂಮಿ ಹಾಗೂ ಐಕ್ಯಸ್ಥಳವಾಗಿರುವ ಪವಿತ್ರ ಕೂಡಲಸಂಗಮದಲ್ಲೇ ಕಳೆದರು. ಮಹಾಮಾನವತಾವಾದಿ, ವಿಶ್ವಗುರು, ವಿಭೂತಿ ಪುರುಷನ, ಕಾಯಕ ದಾಸೋಹ ತತ್ವವನ್ನು ಜಗತ್ತಿಗೆ ಸಾರಿದ ಚೇತನ ಬಸವಣ್ಣ. ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಹುಲ್ ಗಾಂಧಿ ಅವರು ಕೂಡಲಸಂಗಮ ಹಲವು ಸ್ಥಳಗಳಿಗೆ ಭೇಟಿ ಎಲ್ಲರ ಗಮನ ಸೆಳೆದರು.
12 ಗಂಟೆಗೆ ಕೂಡಲಸಂಗಮ ಹೆಲಿಪ್ಯಾಡ್ ಬಂದಿಳಿದ ರಾಹುಲ್ ಗಾಂಧಿ ಅಲ್ಲಿಂದ ನೇರವಾಗಿ ಸಂಗಮನಾಥ ದೇವಸ್ಥಾನಕ್ಕೆ ಆಗಮಿಸಿದರು. ಹಣೆಗೆ ವಿಭೂತಿ ಧರಿಸಿ, ಕೊರಳಲ್ಲಿ ಹೂಮಾಲೆ ಹಾಕಿಕೊಂಡು ಸಂಗಮನಾಥನಿಗೆ ವಿಶೇಷ ಪೂಜೆ ಮಾಡಿಸಿ, ಬಳಿಕ ತಾವೇ ದೀಪದಾರತಿ ಬೆಳಗಿ ಭಕ್ತಿಯಿಂದ ನಮಸ್ಕರಿಸಿದರು.
ಸಂಗಮನಾಥನಿಗೆ ಪೂಜೆ ಸಲ್ಲಿಸಿ ಬಸವಣ್ಣನವರ ಐಕ್ಯಮಂಟಪಕ್ಕೆ ತೆರಳಿದ ರಾಹುಲ್ ಗಾಂಧಿ ಅಂದಾಜು 50 ಅಡಿ ನದಿ ಆಳದಲ್ಲಿ ಇರುವ ನೂರಾರು ಮೆಟ್ಟಿಲು ಇಳಿದು ಐಕ್ಯಸ್ಥಳಕ್ಕೆ ಹೋಗಿ ಭಕ್ತಿಯಿಂದ ನಮಿಸಿ ಕೆಲ ನಿಮಿಷ ಧ್ಯಾನ ಮಾಡಿದರು. ಈ ವೇಳೆ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವೇಣುಗೋಪಾಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಜೊತೆ ಇದ್ದರು.
ಐಕ್ಯಮಂಪಟದಿಂದ ಬಸವ ಭವನದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 1.50ರ ಸುಮಾರಿಗೆ ಅಲ್ಲಿಂದ ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ನಿತ್ಯ ಉಚಿತ ದಾಸೋಹ ಭವನಕ್ಕೆ ತೆರಳಿದರು. ಅಲ್ಲಿ ಸಾಮೂಹಿಕವಾಗಿ ಎಲ್ಲರ ಜೊತೆ ಕುಳಿತುಕೊಂಡು ಪ್ರಸಾದ ಸವಿದರು.
ರಾಹುಲ್ ಗಾಂಧಿ ಅವರು ಉತ್ತರ ಕರ್ನಾಟಕದ ಪ್ರಸಿದ್ದ ಖಡಕ್ ಜೋಳದ ರೊಟ್ಟಿ, ಕಾಳು, ಬದನೆಕಾಯಿ ಪಲ್ಲೆ, ಚಪಾತಿ, ಹೋಳಿಗೆ, ಶ್ರೀಖಂಡ, ಅನ್ನ ಸಾಂಬರ್, ಹಪ್ಪಳ, ಉಪ್ಪಿನಕಾಯಿ ಊಟ ಸವಿದರು. ರಾಗಾ ಜೊತೆ ಸಿದ್ದರಾಮಯ್ಯ, ವೇಣುಗೋಪಾಲ, ಎಂ.ಬಿ.ಪಾಟೀಲ, ವಿಜಯಾನಂದ ಕಾಶಪ್ಪನವರ ಪ್ರಸಾದ ಸ್ವೀಕರಿಸಿದರು.
ಇಂದು ರಾಹುಲ್ ಭೇಟಿ ಹಿನ್ನಲೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ರಾಹುಲ್ ಜೊತೆಗೆ 250 ಜನರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಜವಾರಿ ಊಟ ಮಾಡಿದ ಬಳಿಕ ರಾಹುಲ್ ಗಾಂಧಿ ಅವರು ದಾಸೋಹಕ್ಕೆ 5 ಸಾವಿರ ರೂ. ದೇಣಿಗೆ ನೀಡಿ, ರಸೀದಿ ಪಡೆದರು.
ಎಲ್ಲರ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಭಾಗವಹಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರೂ ಅವರಿಗೆ ಭಾಷಣಕ್ಕೆ ಅವಕಾಶ ಸಿಗಲಿಲ್ಲ. ಇದು ಹಲವು ರೀತಿಯ ಚರ್ಚೆಗಳಿಗೆ ಗ್ರಾಸವೊದಗಿಸಿತು. ಇಬ್ಬರು ಸ್ವಾಮೀಜಿಗಳು ಹಾಗೂ ರಾಹುಲ್ ಗಾಂಧಿ ಅವರಿಗೆ ಮಾತ್ರ ಭಾಷಣಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಆದಿಯಾಗಿ ಯಾರಿಗೂ ಭಾಷಣ ಮಾಡಲು ವೇದಿಕೆಯಲ್ಲಿ ಅವಕಾಶ ದೊರೆಯಲಿಲ್ಲ.
ದೇವಸ್ಥಾನಗಳ ದರ್ಶನ, ಬಸವ ಜಯಂತಿ ಕಾರ್ಯಕ್ರಮ, ಪ್ರಸಾದ ಸೇವನೆ ಎಲ್ಲ ಮುಗಿಸಿದ ಬಳಿಕ ರಾಹುಲ್ ಗಾಂಧಿ ಅವರು ಯಾತ್ರಿ ನಿವಾಸದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಕಳೆದರು. ಈ ವೇಳೆ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿನ ಕೆಲ ಮುಖಂಡರ ನಡುವಿನ ಭಿನ್ನಮತ, ಹೊಂದಾಣಿಕೆ ಕೊರತೆ ಬಗ್ಗೆ ಕೆ.ಸಿ. ವೇಣುಗೋಪಾಲ ಅವರು ಪ್ರತ್ಯೇಕ ಸಭೆ ನಡೆಸಿದರು ಎನ್ನಲಾಗಿದೆ.
ಮುಖ್ಯವಾಗಿ ಹುನಗುಂದ ಕ್ಷೇತ್ರದ ವಿಚಾರವಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ವೀಣಾ ಕಾಶಪ್ಪನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹಾಗೂ ಮುಖಂಡ ರವೀಂದ್ರ ಕಲಬುರಗಿ ಅವರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ನಡೆಸಿ, ಎಲ್ಲರೂ ಒಗ್ಗೂಡಿಕೊಂಡು ಹೋಗಿ, ಚುನಾವಣೆಯಲ್ಲಿ ಭಿನ್ನಮತ ಸರಿಯಲ್ಲ. ಎಲ್ಲರೂ ಸೇರಿ ಗೆಲುವಿಗೆ ಶ್ರಮಿಸಿ ಎನ್ನುವ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಅವರು ಸಹ ಆಗಮಿಸಿ ಚುನಾವಣೆ ಬಗ್ಗೆ ಚರ್ಚಿಸಿ ಹೋಗಿದ್ದಾರಂತೆ. ಹಾಗೆಯೇ ದೇವಹಿಪ್ಪರಗಿ ಟಿಕೆಟ್ ಸಿಗದೇ ಅಸಮಧಾನಗೊಂಡಿರುವ ಎಸ್.ಆರ್. ಪಾಟೀಲ ಅವರೊಂದಿಗೆ ಸಹ ವೇಣುಗೋಪಾಲ ಫೋನ್ನಲ್ಲಿ ಮಾತನಾಡಿದ್ದಾರೆಂದು ಹೇಳಲಾಗುತ್ತಿದೆ.
ಲಿಂಗಾಯತ ಸಿಎಂ ಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಾರಾಸಗಟಾಗಿ ಭ್ರಷ್ಟಾಚಾರಿಗಳು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆನ್ನುವ ವಿವಾದದ ಬಗ್ಗೆ ಭಾನುವಾರ ಮಾಜಿ ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ವಿವಾದ ಆಗುವ ರೀತಿಯ ಯಾವುದೇ ಹೇಳಿಕೆಯನ್ನು ಕೊಟ್ಟೆ ಇಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಲಿಂಗಾಯತ ಸಮಾಜದಿಂದ ಬಹಳ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಈಗ ಇರುವ ಬಸವರಾಜ ಬೊಮ್ಮಾಯಿ ಕರಪ್ಟ್ ಆಗಿದ್ದಾರೆಂದು ಎಂದಿದ್ದೇನೆ. ನಾನು ಲಿಂಗಾಯತರು ಎಂದಿಲ್ಲ ಎಂದರು.
ನಿಮ್ಮ ಹೇಳಿಕೆಯನ್ನು ತಿರುಚುವ ಉದ್ದೇಶ ಏನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅದನ್ನು ನೀವೆ ಹೇಳ್ರಪ್ಪ ಎಂದ ಅವರು, ನನಗೆ ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಸಾಧ್ಯವಿಲ್ಲ. ನನಗೆ ಲಿಂಗಾಯತರ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ ಅಪಾರ ಗೌರವ ಇದೆ ಎಂದರು.
ಕೂಡಲಸಂಗಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಡಿಕೆಶಿ ಏಕೆ ಬಂದಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇಲ್ಲ ಅವರು ಬೇರೆ ಕಡೆಗೆ ಪ್ರಚಾರದಲ್ಲಿ ಇದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ. ನಾಳೆ ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.
ಇನ್ನು ರಾಹುಲ್ ಗಾಂಧಿ ಅವರು ಬಂದಿದ್ದು ಸಹ ಚುನಾವಣೆಗೋಸ್ಕರ ಅಲ್ಲ. ಅವರಿಗೆ ಸಂಘಟಿಕರು ಆಹ್ವಾನ ನೀಡಿದ್ದರು. ಹೀಗಾಗಿ ಭಾಗವಹಿಸಿದ್ದಾರೆ ಎಂದು ಹೇಳಿದರು. ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣಿಸಿದ್ದಕ್ಕೆ ಪಕ್ಷಕ್ಕೆ ಮುಳುವು ಆಗುತ್ತಾ ಎಂದಿದ್ದಕ್ಕೆ ನಾನು ಬಿಜೆಪಿ ಮುಳುಗಿ ಹೋಗುತ್ತೆ ಎನ್ನಲ್ಲ. ಆದರೆ, ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಿದ್ದು ಮಾತ್ರ ಸತ್ಯ ಎಂದರು.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಭಾನುವಾರ ಕೂಡಲಸಂಗಮ ಕ್ಷೇತ್ರಕ್ಕೆ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಹಿಸಲು ಆಗಮಿಸಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಮಿಸಿದ್ದ ಹೆಲಿಕಾಪ್ಟರನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದರು.