

ಪರಶುರಾಮಪುರ: ಆಂಧ್ರಗಡಿಯ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿ ಅವರಿಗೆ ಡಾ.ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರ ಸೇವೆ ಗುರುತಿಸಿ, ಬೆಂಗಳೂರಿನ ಕರ್ನಾಟಕ ಪ್ರತಿಭಾ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಚಳ್ಳಕೆರೆ ತಾಲೂಕಿನ ಆಂಧ್ರಗಡಿಯಂಚಿನಲ್ಲಿರುವ ಗಡಿ ಗ್ರಾಮ ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಪ್ರೌಢಶಾಲಾ ಮಕ್ಕಳ ಸಮಗ್ರ ಬೆಳವಣಿಗೆಗೆ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಗಳನ್ನು ಏರ್ಪಡಿಸುವ ಜತೆಗೆ ಅವರಲ್ಲಿ ಉತ್ತಮ ಕಲಿಕಾಸಕ್ತಿ ಮೂಡಿಸುವ ಕಾರ್ಯ ಗುರುತಿಸಿ ಪ್ರಶಸ್ತಿಗೆ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಶಂಕರ ಪಾಟೀಲ ತಿಳಿಸಿದ್ದಾರೆ.