

ಚಳ್ಳಕೆರೆ: ಕೃಷ್ಣ ಪರಮಾತ್ಮನ ವಿಚಾರ ಸಂಕೀರ್ತನೆಗಳು ಮನುಕುಲದ ಲೌಕಿಕ ಬದುಕಿಗೆ ಜಾಗೃತಿ ಮೂಡಿಸುತ್ತವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ವಾಸವಿ ಮಹಲ್ನಲ್ಲಿ ಭಾನುವಾರ ತಾಲೂಕಿನ ಗಿರಿಧಾರಿ ಭಕ್ತಿ ಕೇಂದ್ರ, ಬೆಂಗಳೂರಿನ ಇಸ್ಕಾನ್ ನರಸಿಂಹ ಗಿರಿಧಾರಿ ಮಂದಿರ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ಶ್ರೀ ರಾಧಾ ಕೃಷ್ಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಬದುಕಿನ ಮೌಲ್ಯತೆ ಮರೆಯಾಗುತ್ತಿದೆ ಎಂದರು.
ಮನುಷ್ಯನ ದುರಾಸೆ ಬದುಕಿನ ಲಲಾಸೆಯಿಂದ ನೆಮ್ಮದಿ ದೊರೆಯುತ್ತಿಲ್ಲ. ಜೀವನದ ಸಂಕಟಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಇಸ್ಕಾನ್ ಸಂಸ್ಥೆಯವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಕ್ತಿ ಮಾರ್ಗದ ಧಾರ್ಮಿಕ ವಿಚಾರ ಜಾಗೃತಿ ಮೂಡಿಸುತ್ತಿರುವುದು ಸಮಾಜಕ್ಕೆ ಅಗತ್ಯ ಎನಿಸುತ್ತದೆ ಎಂದು ತಿಳಿಸಿದರು.
ಇಸ್ಕಾನ್ ನರಸಿಂಹ ಗಿರಿಧಾರಿ ಮಂದಿರದ ಅಧ್ಯಕ್ಷ ವರದ ಕೃಷ್ಣ ದಾಸ ಮಾತನಾಡಿ, ಕೃಷ್ಣರ ಗೀತೋಪದೇಶ ತಿಳಿಯುವ ಮೂಲಕ ಲೋಕದ ಮಾರ್ಗ ತಿಳಿಯಬೇಕಿದೆ ಎಂದರು.
ರಾಧಾ ಕೃಷ್ಣರ ಜಯಂತಿ ಅಂಗವಾಗಿ ಬೆಳ್ಳಿ ರಥೋತ್ಸವದೊಂದಿಗೆ ನಗರ ಸಂಕೀರ್ತನೆ ಮಾಡಲಾಗಿದೆ. ಬಳಿಕ ವಿಚಾರ ಗೋಷ್ಠಿ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ಮೇಟಿ ಚಂದ್ರಶೇಖರ್ ಗುರೂಜಿ, ನೇತಾಜಿ ಪ್ರಸನ್ನ, ಜಗದೀಶ್ವರ್ ಆಚಾರ್, ಎಂ.ಜೆ. ಕಿರಣ್, ಶಿವಣ್ಣ, ಮಂಜುಳಾ, ಸುನಿತಾ,ವೀಣಾ, ಜಯಮ್ಮ ಇತರರಿದ್ದರು.