

ಹುಬ್ಬಳ್ಳಿ: ಇಲ್ಲಿಯ ನವನಗರದ ರಡ್ಡಿ ಸಮುದಾಯ ಭವನದ ಅಭಿವೃದ್ಧಿ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲು 10 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಅರವಿಂದ ಬೆಲ್ಲದ ಭರವಸೆ ನೀಡಿದರು.
ರಡ್ಡಿ ಸೇವಾ ಬಳಗದ ವತಿಯಿಂದ ನವನಗರದಲ್ಲಿ ನಿರ್ಮಿಸಿದ ಸುಸಜ್ಜಿತ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಜನರು ತಮಗೆ ಸದಾ ಬೆಂಬಲಿಸುತ್ತ ಬಂದಿದ್ದು, ಅವರ ಯಾವುದೇ ಸಮಸ್ಯೆಗಳಿದ್ದರೂ ಬಗೆ ಹರಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ನೂತನ ಸಮುದಾಯ ಭವನ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಇದಕ್ಕೆ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದರು.
ನವನಗರ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ತರಕಾರಿ ಮಾರುಕಟ್ಟೆ ಹೈಟೆಕ್ ಮಾಡಲಾಗಿದೆ. ಬಿಆರ್ ಟಿಎಸ್ ನಿಲ್ದಾಣ ನವನಗರ ಸಂಪರ್ಕಿಸುವ ರಸ್ತೆಯನ್ನು ವಾಹನಮುಕ್ತ ಮಾರ್ಗ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
ಅತಿಥಿಗಳಾಗಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸಮುದಾಯ ಎಲ್ಲ ಸಮಾಜದೊಂದಿಗೂ ಬೆರೆಯುವ ಸಹೃದಯಿ ಸಮಾಜವಾಗಿದೆ. ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಆಶೀರ್ವಾದದಿಂದ ನಮ್ಮ ಸಮುದಾಯ ಶಿಸ್ತು ಬದ್ಧ ಜೀವನ ನಡೆಸುತ್ತಿದೆ. ಎಲ್ಲ ಸಮಾಜದ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.
ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ್ ಮಾತನಾಡಿ, ರಡ್ಡಿ ಸಮುದಾಯದವರು ಎಲ್ಲ ಸಮಾಜದೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನವನಗರ ರಡ್ಡಿ ಸೇವಾ ಬಳಗದ ಅಧ್ಯಕ್ಷ ಮಹೇಶ ಎಲ್. ಪಾಟೀಲ ಮಾತನಾಡಿ, ಸಮುದಾಯ ಭವನಕ್ಕೆ ಸಮಾಜದ ಅನೇಕ ಗಣ್ಯರು ಕೊಡುಗೆ ನೀಡಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಕೈಗೂಡಿಸಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರು ಕಟ್ಟಡಕ್ಕೆ 5 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಉಪಾಧ್ಯಕ್ಷ ವಿ.ಆರ್. ಮುದರಡ್ಡಿ, ನಿರ್ಮಿತಿ ಕೇಂದ್ರದ ಅಧಿಕಾರಿ ಶಿವಕುಮಾರ, ರಮೇಶ ಜಂಗಲ್, ವಿ.ಎಲ್. ಪಾಟೀಲ, ಆರ್.ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮುಗನೂರ, ಆರ್. ಹನುಮಂತಪ್ಪ, ಎಸ್.ಸಿ. ಜಾಲಿಕಟ್ಟಿ, ರಮೇಶ ನಂದ್ಯಾಳ, ಸುನೀಲ ರಡ್ಡೇರ, ನಾರಾಯಣ ಚೌಡರಡ್ಡಿ, ಬಿ.ಎಚ್. ರಡ್ಡೇರ, ಡಾ. ಎಂ.ಐ. ರಡ್ಡೇರ ಉಪಸ್ಥಿತರಿದ್ದರು.
ಎಂ.ವಿ. ಕರಕಗೌಡರ ವಂದಿಸಿದರು.