ರಾಡಾರ್ ಮಳೆ ಮುನ್ಸೂಚನೆ ಸಕ್ಸಸ್!, 250-300 ಕಿ.ಮೀ. ವ್ಯಾಪ್ತಿಯಲ್ಲಿ ಮುಂಗಾರು ಪೂರ್ವಮಳೆ ಮಾಹಿತಿ, ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್ ಮುನ್ಸೂಚನೆ

mng_20 may C Band Doppler Weather Radar
Published on

-ಶ್ರವಣ್‌ಕುಮಾರ್ ನಾಳ, ಮಂಗಳೂರು

ಹವಾಮಾನದ ನಿಖರ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ‘ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್’ ಮುಂಗಾರು ಪೂರ್ವಮಳೆ ಸೂಚನೆಯ ನಿಖರ ಮಾಹಿತಿ ನೀಡುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿದೆ.

ಪಶ್ವಿಮ ಕರಾವಳಿಯ ತಿರುವನಂತಪುರ, ಕೊಚ್ಚಿ, ಗೋವಾ ಮತ್ತು ಮುಂಬಯಿನಲ್ಲಿನ ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್ ಮೂಲಕ ಪಡೆದ ಮಾಹಿತಿಯನ್ವಯ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೇ 21ರಿಂದ 23ರವರೆಗೆ ಆರೆಂಜ್ ಮತ್ತು ರೆಡ್ ಅಲರ್ಟ್, ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, 55 ಕಿ.ಮೀ ವೇಗದ ಪ್ರಖರತೆ ಇರಲಿದೆ ಹವಾಮಾನ ಇಲಾಖೆ ಉನ್ನೆಚ್ಚರಿಕಾ ಮಾಹಿತಿ ಸೋಮವಾರ ಹೊರಡಿಸಿತ್ತು. ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್ ನೀಡಿದ ನಿಖರ ಮುನ್ಸೂಚನೆಯನ್ವಯ ಕರಾವಲಿಯು ಸಂಪೂರ್ಣ ಅಲರ್ಟ್ ಆಗಿದ್ದು, ಕರಾವಳಿ ಭಾಗದ ಬಂದರುಗಳು ಅಪಾಯ ಸೂಚಕ ಸಿಗ್ನಲ್ ನಂಬರ್ 3 ಪ್ರದರ್ಶಿಸುವಂತೆ ಸಲಹೆಯನ್ನು ಹವಾಮಾನ ಇಲಾಖೆ ನೀಡಿದೆ.

*ಮುಂಗಾರು ಪೂರ್ವಮಳೆ ಸೂಚನೆ

ಪಶ್ವಿಮ ಕರಾವಳಿಯಲ್ಲಿ ತಿರುವನಂತಪುರ, ಕೊಚ್ಚಿ, ಗೋವಾ ಮತ್ತು ಮುಂಬಯಿನಲ್ಲಿ ಈಗಾಗಲೇ ರಾಡಾರ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಧ್ಯಕ್ಕೆ ಕಳೆದ 2 ವಾರಗಳಿಂದ ಕರಾವಳಿ 250-300 ಕಿ.ಮೀ. ವ್ಯಾಪ್ತಿಯಲ್ಲಿ ಮುಂಗಾರು ಪೂರ್ವಮಳೆ ಸೂಚನೆ ಇಲ್ಲಿಂದಲೇ ನಿಖರವಾಗಿ ಪಡೆಯಲಾಗಿದೆ. ಕರ್ನಾಟದ ಕರಾವಳಿ ಭಾಗದಲ್ಲಿ ಮಧ್ಯದಲ್ಲಿ ಬಾಕಿಯಾಗಿತ್ತು. ಇದೀಗ ಮಂಗಳೂರಿಗೂ ರಾಡಾರ್ ಲಭಿಸಿದೆ. ಈ ಕೇಂದ್ರ ಮಂಗಳೂರಿನ ಶಕ್ತಿನಗರದ ಭಾರತೀಯ ಹವಾಮಾನ ಇಲಾಖೆಯ ಕೇಂದ್ರದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಗೊಂಡಿದೆ. ಈ ಬಾರಿಯ ಮುಂಗಾರಿನಲ್ಲಿ ರಾಡಾರ್ ಮೂಲಕವೇ ಹವಾಮಾನದ ಮಾಹಿತಿಗಳನ್ನು ಪಡೆದು ಬಿತ್ತರಿಸುವ ಉದ್ದೇಶ ಹೊಂದಲಾಗಿದೆ.

-----------------

ಏನಿದು ಸಿ ಬ್ಯಾಂಡ್ ಡಾಪ್ಲರ್ ವೆದರ್ ರಾಡಾರ್!

‘ಮಿಷನ್ ಮೌಸಮ್’ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಸುಮಾರು 2000 ಕೋ.ರೂ. ವೆಚ್ಚದಲ್ಲಿ ಹವಾಮಾನ ಇಲಾಖೆಗೆ ಸಂಬಂಧಿಸಿದ ಉಪಕರಣಗಳ ಆಧುನೀಕರಣ ಮತ್ತು ಉನ್ನತೀಕರಣಕ್ಕೆ ಉದ್ದೇಶಿಸಿದ್ದು, ಅದರಂತೆ ಸುಮಾರು 10 ಕೋ.ರೂ ವೆಚ್ಚದಲ್ಲಿ ‘ಸಿ ಬ್ಯಾಂಡ್ ಡಾಪ್ಲರ್ ವೆದರ್ ರಡಾರ್’ ಅಳವಡಿಸಲಾಗುತ್ತಿದೆ. ಗುಡುಗು - ಮಿಂಚು ಸಹಿತ ಮಳೆ, ಆಲಿಕಲ್ಲು ಮಳೆ, ಬಿರುಸಿನ ಮಳೆ, ಪ್ರವಾಹ ಮುನ್ಸೂಚನೆ, ಗಾಳಿಯ ಚಲನೆ, ಸಮುದ್ರದಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಮಾಹಿತಿಗಳು ರಡಾರ್ ಒದಗಿಸಲಿದೆ. ರಾಡಾರ್ ತನ್ನ ಕೇಂದ್ರದಿಂದ ವೃತ್ತಾಕಾರದಲ್ಲಿ 250-300 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನದ ಸ್ಥಿತಿಗತಿಯನ್ನು ಅವಲೋಕಿಸಲಿದೆ. ಕರಾವಳಿ ಮಾತ್ರವಲ್ಲದೆ, ದಕ್ಷಿಣ ಮತ್ತು ಮಧ್ಯ ಕರ್ನಾಟಕ, ಕೇರಳದ ಕೊಯಿಕ್ಕೋಡ್ ವರೆಗಿನ ಹವಾಮಾನ ಮಾಹಿತಿಗಳು ಇದರಿಂದ ಲಭ್ಯವಾಗಲಿದ್ದು, ಅರಬ್ಬಿ ಸಮುದ್ರದ ಸ್ವಲ್ಪ ಭಾಗವನ್ನೂ ರಡಾರ್ ಅವಲೋಕಿಸುತ್ತಿದೆ. ಸಧ್ಯಕ್ಕೆ ಇದು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದೆ.

------------------

ವಾಯುಗೋಳ-ಸಾಗರಗಳ ಬಗ್ಗೆ ಮುನ್ಸೂಚನೆ

ರಡಾರ್ ರೇಡಿಯೋ ಫ್ರೀಕ್ವೆನ್ಸಿ ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತದೆ. ರಡಾರ್ ಕಳುಹಿಸುವ ತರಂಗಗಳು ಮೋಡದ ಒಳಗಿರುವ ಮಂಜುಗಡ್ಡೆ ಬಡಿದು ರಡಾರ್‌ಗೆ ವಾಪಾಸಗುತ್ತವೆ. ಸಿಗ್ನಲ್ ಹೋಗಿ ವಾಪಾಸಾಗುವ ಸಮಯ, ದೂರ, ಎತ್ತರ, ವಿಸ್ತಾರ ಮೊದಲಾದವುಗಳನ್ನು ಕಲೆ ಹಾಕಿ ಯಾವ ಪ್ರದೇಶದಲ್ಲಿ ಯಾವ ದಿಕ್ಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನಿಖರವಾಗಿ ನೀಡಲಿದೆ. ಎಲ್ಲಿ ಮೋಡಗಳು ದಟ್ಟವಾಗುವುದು, ಗಾತ್ರ ಹಿರಿದಾಗುವುದು, ಯಾವ ದಿಕ್ಕಿನಲ್ಲಿ ಚಲಿಸುತ್ತದೆ, ಮೋಡದ ಒಳಗೆ ಮಂಜುಗಡ್ಡೆಗಳು ಉಂಟಾಗಿದೆಯೇ, ಆಲಿಕಲ್ಲು ಮಳೆಯ ಪೂರ್ವ ಮಾಹಿತಿ, ಎಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ರಡಾರ್‌ನಿಂದ ಲಭ್ಯವಾಗುವ ಮಾಹಿತಿಯಂತೆ ಕೃಷಿಕರಿಗೆ, ಜನ ಸಾಮಾನ್ಯರಿಗೆ ಮುನ್ನೆಚ್ಚರಿಕೆಗಳನ್ನು ವಿಪತ್ತು ಮುನ್ಸೂಚನೆಗಳನ್ನು ಪ್ರತಿ ಮೂರು ಗಂಟೆಗೊಮ್ಮೆ ನೀಡಲಾಗುತ್ತದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಬದಲಾವಣೆಗಳೂ ರಡಾರ್‌ನ ಸ್ಕ್ಯಾನಿಂಗ್‌ನಲ್ಲಿ ಗೋಚರವಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ, ಕಣ್ಣೂರು ಸೇರಿದಂತೆ ಸುತ್ತಲಿನ ವಿಮಾನಯಾನ ಸೇವೆಗಳಿಗೆ ರಾಡಾರ್‌ನಿಂದ ಹೆಚ್ಚಿನ ಅನುಕೂಲವಾಗಲಿದೆ.

--------------

ಶಕ್ತಿನಗರ ಐಎಂಡಿ ಕೇಂದ್ರದಲ್ಲಿ ರಡಾರ್ ಅಳವಡಿಕೆ ಪೂರ್ಣಗೊಂಡಿದ್ದು, ಉಪಕರಣದ ತಪಾಸಣ ಪ್ರಕ್ರಿಯೆಗಳು ನಡೆಯುತ್ತಿದೆ. ಹೈದರಾಬಾದ್‌ನ ಆಸ್ಟ್ರಾ ಎಎಂಪಿಎಲ್ ಸಂಸ್ಥೆ ರಡಾರ್ ಅಳವಡಿಸುತ್ತಿದ್ದು, ರಡಾರ್ ಸಂಗ್ರಹಿಸುವ ಮಾಹಿತಿಯನ್ನು ಹವಾಮಾನ ಇಲಾಖೆಯ ಹೊಸ ದಿಲ್ಲಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಬೆಂಗಳೂರು ಹವಾಮಾನ ಇಲಾಖೆಗೆ ಬಂದು ಸಾರ್ವಜನಿಕರಿಗೆ ಮಾಹಿತಿ ರವಾನೆಯಾಗುತ್ತದೆ.

- ಸಜೀವ್ ರಾಮ್

ವಿಜ್ಞ್ಞಾನಿ-ಡಿ, ಐಎಂಡಿ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net