

ಕೆರೂರ: ಪಟ್ಟಣದ ಆರಾಧ್ಯದೈವ ಭದ್ರಕಾಳಿ ಸಮೇತ ರಾಚೋಟೇಶ್ವರ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನದಲ್ಲಿ ರಾಚೋಟೇಶ್ವರ ದೇವರಿಗೆ ಮಾಹಾಭಿಷೇಕ, ರುದ್ರಾಭಿಷೇಕ ಹಾಗೂ ವಿವಿಧ ಪೂಜಾಕಾರ್ಯಗಳು ನಡೆದವು. ಪಟ್ಟಣದ ಪ್ರಮುಖ ಬದಿಗಳಲ್ಲಿ ಕಲಸದ ಮೆರವಣಿಗೆ ಸಕಲ ಮಂಗಲ ವಾಧ್ಯಗಳೊಂದಿಗೆ ನಡೆಯಿತು. ಮೆರವಣಿಗೆಯಲ್ಲಿ ಶಕ್ತಿ ಗೊಂಬೆ ಕುಣಿತವು ಜನರನ್ನು ಆಕರ್ಷಿಸಿತು.
ರಥವನ್ನು ವಿವಿಧ ಬಗೆಯ ಹೂ, ಬಣ್ಣ ಬಣ್ಣದ ಧ್ವಜ, ರುದ್ರಾಕ್ಷಿ ಮಾಲೆ, ಹೂವಿನ ಮಾಲೆಗಳಿಂದ ಶೃಂಗಾರ ಮಾಡಲಾಗಿತ್ತು.
ರಥೋತ್ಸವಕ್ಕೂ ಮೊದಲು ನಂದಿ ಕೋಲುಗಳ ಉತ್ಸವ ನಡೆಯಿತು. ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ರಾಚೋಟೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಪ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ‘ರಾಚೋಟೇಶ್ವರ ಮಹಾರಾಜ ಕಿ ಜೈ’ ಎನ್ನುತ್ತ ರಥವನ್ನು ಎಳೆದರು. ದೇವಸ್ಥಾನದ ಆವರಣದಲ್ಲಿ ನೆರದಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಜಾತ್ರೆಗೆ ಹೊರ ರಾಜ್ಯದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.
ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆರ್.ಆರ್. ಶೆಟ್ಟರ, ಅರ್ಚಕ ಬಸಯ್ಯ ಮಠಪತಿ,ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದಣ್ಣ ಕೊಣ್ಣೂರ, ಶಿವಪ್ಪ ಗುತ್ತನ್ನವರ, ಕುಮಾರ ಯಂಡಿಗೇರಿ, ಧನಂಜಯ ಕಂದಕೂರ, ಪ್ರದೀಪ ತುಳಸಿಗೇರಿ, ಪರಶುರಾಮ ಮಲ್ಲಾಡದ, ಶಿವಪುತ್ರಪ್ಪ ಹುಂಡೇಕಾರ, ಅಶೋಕ ಜಿಗಳೂರ, ಹರೀಶ ಕೊಣ್ಣೂರ, ಪ್ರಭು ಘಟ್ಟದ, ಅಶೋಕ ಶೆಟ್ಟಿ ಇದ್ದರು.