

ರಬಕವಿ/ಬನಹಟ್ಟಿ ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ ಎಂದ ಕವಿ ರಬಕವಿ ಈಶ್ವರ ಸಣಕಲ್ಲರನ್ನು ಸರ್ಕಾರ ಮರೆತರೂ ರಬಕವಿ ನಗರದ ಜನ ಮರೆತಿಲ್ಲ ಎಂದು ನಗರದ ಕನ್ನಡ ಸಂಘದ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಹೇಳಿದರು.
ನಗರದ ಎಂ.ವಿ. ಪಟ್ಟಣ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಣಕಲ್ಲರ 118ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಅವರ ಕವನವನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ. ತಮ್ಮ ಈ ಕವಿತೆಯಿಂದ ಈಶ್ವರರು ಎಷ್ಟು ಜನಪ್ರಿಯರಾಗಿದ್ದರೆಂದರೆ, ಸಿಡಿಮಿಡಿಗೊಂಡ ದ.ರಾ. ಬೇಂದ್ರೆ, ನಾನು ಬೇಂದ್ರೆ, ಅವನು ಸಣ(ಸಣ್ಣ)ಕಲ್ಲ ಎಂದು ಗೇಲಿ ಮಾಡಿದ್ದೂ ಉಂಟು ಎಂದು ನೆನಪಿಸಿದರು.
ಪ್ರೊ. ರಾಜೇಶ ನೋಟದ ಮಾತನಾಡಿ, ಇಂಥ ಕುಟುಕು ಹೇಳಿಕೆ ನೀಡುವುದರಲ್ಲಿ ಬೇಂದ್ರೆಯವರು ತಮ್ಮ ಕವನಗಳಷ್ಟೇ ಸುಪ್ರಸಿದ್ಧರು ಎಂಬುದು ಬೇರೆ ಮಾತು. ಆದರೆ, ಈಶ್ವರ ಸಣಕಲ್ಲರ ಆ ಸುಪ್ರಸಿದ್ಧ ಗೀತೆ ಮರೆತೇ ಹೋಗಿತ್ತು. ಮೊದಲ ಒಂದೆರಡು ಸಾಲುಗಳು ಮಾತ್ರ, ನಾಲಿಗೆಗೆ ಅಂಟಿದ ದ್ರವದಂತೆ ಗಟ್ಟಿಯಾಗಿ ಉಳಿದಿದ್ದವು. ಈ ಕವಿತೆ ಬಗ್ಗೆ ವಿವರಣೆ ಬರೆಯುವುದೇ ವ್ಯರ್ಥ. ಏಕೆಂದರೆ, ಎಲ್ಲವೂ ಸ್ವಯಂವೇದ್ಯ, ಸರಳ, ಸ್ಪಷ್ಟ. ನೀವೇ ಓದಿನೋಡಿ ಎಷ್ಟು ಸುಂದರವಾಗಿದೆ ಎಂದು ಹೇಳಿದರು.
ಸಣಕಲ್ಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಿ. ಎಂ. ಯಂಡಿಗೇರಿ, ಬಿ. ಜಿ. ದುಂಬಾಳೆ, ನಾರಾಯಣ ಬೋರಗಿನಾಯಕ, ಎಂ.ಎ. ಪಾಯೆ, ಬಿ. ಎಸ್. ಕಾಂಬಳೆ, ಬಿ. ಎಸ್. ಪಾಟೀಲ, ಎಸ್. ಜಿ. ಸರಿಕರ, ಪಿ. ಎಚ್. ಪ್ರತಾಪ, ಯಶವಂತ ವಾಜಂತ್ರಿ, ಬಿ. ಎಂ. ಮಟ್ಟಿಕಲಿ, ಯಶವಂತ ವಾಗಮೋರೆ, ಚಂದು ಬುಯ್ಯರ, ವಿ. ಎಸ್. ಹೊಸಮನಿ, ಆಶಾ ಮುದ್ದಾಪುರ ಇತರರಿದ್ದರು.