

ರಬಕವಿ/ಬನಹಟ್ಟಿ: ದೇವಸ್ಥಾನ, ಮಠಗಳು ಸುಂದರ ಬದುಕು ಹಾಗೂ ಸಂಸ್ಕಾರ ಕಲಿಸಿ ಕೊಡುವ ಕೇಂದ್ರಗಳಿದ್ದಂತೆ ಎಂದು ಶ್ರೀಶೈಲ ಜಗದ್ಗುರು ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ರಬಕವಿ ದಾನಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ನೂತನ ರಥ ಅರ್ಪಣಾ ಸಮಾರಂಭಕ್ಕೆ ಚಾಲನೆ ನೀಡಿ, ನಂತರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ತೇರು ಎಳೆಯುವ ಪದ್ಧತಿ ಪ್ರಾಚೀನ ಕಾಲದದಿಂದಲೂ ಆಗಿನ ಆಚಾರ್ಯರು ಪ್ರಾರಂಭಿಸಿದರು. ಆದರೆ, ಕೆಲವು ಪುರಾಣ ಪುಣ್ಯಕಥೆಗಳಲ್ಲಿ ಹೇಳುವಂತೆ ದೇವರು ಎಲ್ಲರಿಗೂ ಸಮಾನನಾದವನು. ಹಿಂದಿನ ಕಾಲದಲ್ಲಿ ಕೆಲವು ಸಮುದಾಯಕ್ಕೆ ಗುಡಿಗಳಲ್ಲಿ ದೇವರ ದರ್ಶನ ಭಾಗ್ಯ ಇರಲಿಲ್ಲ. ಆದ್ದರಿಂದಲೇ ದೇವರೇ ಹೊರಗಡೆ ಬಂದು ತೇರಿನಲ್ಲಿ ನಿಂತು ಆಶೀರ್ವದಿಸುತ್ತಿದ್ದ ಎಂಬುದು ಪ್ರತೀತಿ ಇದೆ ಎಂದು ತಿಳಿಸಿದರು.
ಅಲ್ಲದೆ, ಧರ್ಮ ಕಾರ್ಯ, ದೇವರು, ಮಠ ಮಾನ್ಯಗಳಿಗೆ, ಪ್ರಕೃತಿಗೆ ನೀವು ದಾನ ಕೊಟ್ಟರೆ ನಿಮಗೆ ಸಾವಿರ ಪಟ್ಟು ಅದು ಮರಳಿಸುತ್ತದೆ ಎಂದರು.
ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿದರು.
ತೇರು ದಾನಿ ಮಲ್ಲೇಶಪ್ಪ ಕುಚನೂರ ಮತ್ತು ಶೇಖರ ಕೊಟ್ರಶೆಟ್ಟಿ ದಂಪತಿ ಹಾಗೂ ಹಲವಾರು ದಾನಿಗಳನ್ನು ಸನ್ಮಾನಿಸಲಾಯಿತು.
ಶಾಸಕ ಸಿದ್ದು ಸವದಿ, ಸಂಜಯ ಉಮದಿ, ಧರೆಪ್ಪ ಉಳ್ಳಾಗಡ್ಡಿ, ಎಂ.ಬಿ. ನಾಶಿ, ಶಂಕರ ಗಣಮುಖಿ, ಮಹಾದೇವ ದೂಪದಾಳ, ಶಿವಜಾತ ಉಮದಿ, ನಾರಾಯಣ ಬೋರಗಿನಾಯಕ, ಆರ್. ಬಸವರಾಜ, ಉದಯ ಜಿಗಜಿನ್ನಿ ಇತರರಿದ್ದರು.