

ಮಡಿಕೇರಿ:
ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಡಿಕೇರಿಯಲ್ಲಿ ಇರುವ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಗಾಯಾಳುಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಹಾಗಾಗಿ ನಾಯಿ ಕಡಿತ ಪ್ರಕರಣಗಳಲ್ಲಿ ಚಿಕಿತ್ಸೆ ವಿಳಂಬ ಆಗುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಈಗ ನಾಯಿ ಕಡಿತಕ್ಕೆ ಒಳಗಾದವರಿಗೆ ಲಸಿಕೆ ನೀಡಲೆಂದೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ರೇಬಿಸ್ ನಿರೋಧಕ ಚಿಕಿತ್ಸಾಲಯ ಆರಂಭವಾಗಿದೆ.
ನಾಯಿ ಅಥವಾ ಸಾಕು ಪ್ರಾಣಿಗಳು ಕಚ್ಚಿದರೆ ಎಲ್ಲ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಜತೆಗೆ ರೇಬಿಸ್ ನಿರೋಧಕ ಲಸಿಕೆ ಲಭ್ಯವಿದೆ. ಆದರೆ ಹೆಚ್ಚು ಆಳವಾದ ಅಥವಾ ಗಂಭೀರ ಸ್ವರೂಪದ ಗಾಯಗಳಾದಲ್ಲಿ ಹಾಗೂ ಹೆಚ್ಚು ಗಾಯಗಳಾಗಿದ್ದಲ್ಲಿ ಮಡಿಕೇರಿಯಲ್ಲಿ ಇರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಗೆ ಬರಬೇಕು. ನಾಯಿ ದಾಳಿಗೆ ಒಳಗಾದವರು ಇಲ್ಲಿಯ ತನಕ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಅಥವಾ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಹಾಗೂ ಲಸಿಕೆ ಪಡೆದುಕೊಳ್ಳಬೇಕಿತ್ತು.
ಈ ವಿಭಾಗಗಳಲ್ಲಿ ಇತರೆ ರೋಗಗಳಿಂದ ಬಳಲುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಾಯಿ ಕಡಿತಕ್ಕೆ ಒಳಗಾದವರು ರೇಬಿಸ್ ಲಸಿಕೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲು ಹೆಚ್ಚು ಹೊತ್ತು ಕಾಯಬೇಕಾದ ಅನಿವಾರ್ಯತೆ ಇತ್ತು. ಬಹಳಷ್ಟು ಸಲ ಆರಂಭದಲ್ಲಿ ಲಸಿಕೆ ಪಡೆದುಕೊಂಡವರು ಇಲ್ಲಿ ಕಾಯಬೇಕಾದ ಅನಿವಾರ್ಯತೆ ಇರುವ ಕಾರಣದಿಂದ ನಂತರದ ಲಸಿಕೆ ಪಡೆಯಲು ಬರುತ್ತಲೇ ಇರಲಿಲ್ಲ. ಸಣ್ಣ ಗಾಯ ವಾಸಿಯಾಗಿದೆ, ಲಸಿಕೆ ಬೇಡ ಎಂದು ನಿರ್ಲಕ್ಷಿಸಿ ವಾಪಸ್ ತೆರಳುತ್ತಿದ್ದರು. ಇದರಿಂದಾಗಿ ಅಂಥವರು ರೇಬಿಸ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇತ್ತು.
ಈ ಬಗ್ಗೆ ಸಾಕಷ್ಟು ದೂರುಗಳು ಆಸ್ಪತ್ರೆ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರಿಂದ ಸಲ್ಲಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ನಾಯಿ ಕಡಿತಕ್ಕೆ ಒಳಗಾದವರಿಗೆ ಸುಲಭವಾಗಿ ಹೆಚ್ಚಿನ ಚಿಕಿತ್ಸೆ ಕೊಡುವ ಉದ್ದೇಶದಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಪ್ರತ್ಯೇಕವಾದ ರೇಬಿಸ್ ನಿರೋಧಕ ಚಿಕಿತ್ಸಾಲಯ ಆರಂಭಿಸಲಾಗಿದೆ. ಇದರಿಂದ ನಾಯಿ ದಾಳಿಗೆ ಒಳಗಾದವರು ಅತ್ಯಂತ ಶೀಘ್ರವಾಗಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಈ ಚಿಕಿತ್ಸಾಲಯದಲ್ಲಿ ಹಾವು ಕಡಿತಕ್ಕೆ ಒಳಗಾದವರನ್ನು ಹೊರತುಪಡಿಸಿ ನಾಯಿ, ಬೆಕ್ಕು, ಕೋತಿ, ಹಸು ಸೇರಿದಂತೆ ಇತರೆ ಪ್ರಾಣಿಗಳ ಕಡಿತಕ್ಕೆ ಒಳಗಾದವರಿಗೂ ಚಿಕಿತ್ಸೆ, ಲಸಿಕೆ ನೀಡಲಾಗುತ್ತದೆ.
ನಾಯಿ ಕಡಿತಕ್ಕೆ ಒಳಗಾದವರ ಗಾಯದ ಆರೈಕೆ, ಅದರ ನಿರ್ವಹಣೆ, ಚಿಕಿತ್ಸೆ, ರೇಬಿಸ್ ನಿರೋಧಕ ಲಸಿಕೆ ನೀಡಲು ಪ್ರತ್ಯೇಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಈ ಚಿಕಿತ್ಸಾಲಯದಲ್ಲಿ ಇದ್ದಾರೆ. ಲಸಿಕೆ ನೀಡಿದ ನಂತರ ಮುಂದೆ ಎಷ್ಟು ದಿನಕ್ಕೆ ಲಸಿಕೆ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇರುವಂಥ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ ಮುಂದೆ ಯಾವ ದಿನಾಂಕದAದು ಲಸಿಕೆ ತೆಗೆದುಕೊಳ್ಳಬೇಕು, ಈಗ ನೀಡಿರುವ ಲಸಿಕೆಯ ಹೆಸರು ಹಾಗೂ ಅದರ ವಿವರಗಳನ್ನೂ ನಮೂದಿಸಲಾಗಿರುತ್ತದೆ. ಈ ಕಾರ್ಡ್ ಇದ್ದರೆ ಬೇರೆ ಕಡೆಯೂ ಲಸಿಕೆ ಮತ್ತು ಚಿಕಿತ್ಸೆ ಮುಂದುವರಿಸಬಹುದು.
ನಾಯಿ ಕಡಿತ ಅಥವಾ ದಾಳಿಗೆ ಒಳಗಾದವರಿಗೆ ಈ ಚಿಕಿತ್ಸಾಲಯದಲ್ಲಿ ಲಸಿಕೆ ಜತೆಗೆ ಇಮ್ಯುನೋ ಗ್ಲಾಬಿಯನ್ಸ್ನಂಥ ಔಷಧಗಳನ್ನೂ ನೀಡಲಾಗುತ್ತದೆ. ಶಂಕಿತ ರೇಬಿಸ್ ಪೀಡಿತ ನಾಯಿ ಕಚ್ಚಿದ್ದರೆ ಅವರ ಮೇಲೆ ತೀವ್ರ ನಿಗಾ ವಹಿಸಿ, ಫಾಲೊ ಅಪ್ ಚಿಕಿತ್ಸೆಗಳನ್ನು ನೀಡಲೂ ಈ ಚಿಕಿತ್ಸಾಲಯ ಬಳಸಿಕೊಳ್ಳಲಾಗುತ್ತಿದೆ.
ಇಲ್ಲಿ ಕೇವಲ ನಾಯಿ ಕಡಿತಕ್ಕೆ ಒಳಗಾದವರಿಗೆ ಮಾತ್ರವಲ್ಲ, ಪ್ರಾಣಿಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುವವರು ನಾಯಿ ಅಥವಾ ಪ್ರಾಣಿ ಕಡಿತಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಅವರಿಗೆ ಮುಂಚಿತವಾಗಿಯೇ ಲಸಿಕೆ ನೀಡುವ ವ್ಯವಸ್ಥೆಯೂ ಇದೆ.
ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಕೊಡಗು ಜಿಲ್ಲೆಯಲ್ಲಿ 4,872 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ಆದರೆ, ಈ ವರ್ಷ ಜನವರಿಯಿಂದ ಜುಲೈವರೆಗೆ 7 ತಿಂಗಳಿನಲ್ಲೇ 3,058 ಮಂದಿಗೆ ನಾಯಿಗಳು ಕಚ್ಚಿವೆ. ನಾಯಿ ಕಡಿತ ಪ್ರಕರಣಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿಅAಶಗಳು ಹೇಳುತ್ತಿವೆ. ರೇಬಿಸ್ ಕಾಯಿಲೆಯಿಂದ ಸಾವು ಖಚಿತ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಹಾಗಾಗಿ, ಸಾರ್ವಜನಿಕರು ಯಾವುದೇ ನಾಯಿ, ಬೆಕ್ಕು ಹಾಗೂ ಇತರೆ ಪ್ರಾಣಿಗಳ ಕಡಿತವನ್ನು ಉದಾಸೀನ ಮಾಡಲೇಬಾರದು. ಯಾವುದೇ ಕಾರಣಕ್ಕೂ ಬೀದಿ ನಾಯಿಗಳ ಸಮೀಪ ಹೋಗಲೇಬಾರದು. ಕೈಯಲ್ಲಿ ಅವುಗಳಿಗೆ ಆಹಾರ ಕೊಡಲೇಬಾರದು. (ಆಹಾರ ಕೊಡಲೇಬೇಕಿದ್ದರೆ ಒಂದು ಕಡೆ ಇಡಬಹುದು). ಮಕ್ಕಳ ಎತ್ತರ ಕಡಿಮೆ ಇರುವುದರಿಂದ ನಾಯಿಗಳು ಮಕ್ಕಳ ಮುಖಕ್ಕೆ ಕಚ್ಚುತ್ತವೆ. ಹಾಗಾಗಿ, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬರಬೇಕು. ನಾಯಿ ಕಚ್ಚಿದ ತಕ್ಷಣ ಗಾಯವನ್ನು ನೀರಿನಿಂದ 10ರಿಂದ 15 ನಿಮಿಷಗಳ ಕಾಲ ತೊಳೆಯಲೇಬೇಕು. ಇಲ್ಲದಿದ್ದರೆ, ಹೆಚ್ಚು ಹೆಚ್ಚು ವೈರಸ್‌ಗಳು ದೇಹ ಪ್ರವೇಶಿಸುತ್ತವೆ ಎನ್ನುತ್ತಾರೆ ವೈದ್ಯರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಇತರ ರೋಗಿಗಳ ಒತ್ತಡದ ಮಧ್ಯೆ ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ವಿಳಂಬ ಆಗುತ್ತಿತ್ತು ಎನ್ನುವ ದೂರುಗಳು ಇದ್ದವು. ಈ ಹಿನ್ನೆಲೆಯಲ್ಲಿ ರೇಬಿಸ್ ನಿರೋಧಕ ಚಿಕಿತ್ಸಾಲಯ ತೆರೆಯಲು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಲೋಕೇಶ್ ಕೂಡಲೇ ಸ್ಪಂದಿಸಿ ಎಲ್ಲ ಬಗೆಯ ಸಹಕಾರ ನೀಡಿದ್ದಾರೆ. ಇದರಿಂದ ಇನ್ನು ಮುಂದೆ ಇಲ್ಲಿ ರೇಬಿಸ್ ಚಿಕಿತ್ಸೆಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಡಾ. ರಾಮಚಂದ್ರ ಕಾಮತ್, ಮುಖ್ಯಸ್ಥ, ಸಮುದಾಯ ಆರೋಗ್ಯ ವೈದ್ಯಕೀಯ ವಿಭಾಗ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ವರ್ಷ 4,872 ಜನರಿಗೆ ಕಚ್ಚಿದ್ದರೆ, ಈ ವರ್ಷ ಇಲ್ಲಿಯ ತನಕ 3,058 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ನಾಯಿ, ಬೆಕ್ಕುಗಳು ಕಚ್ಚಿದರೆ ಯಾರು ಕೂಡ ನಿರ್ಲಕ್ಷö್ಯ ತೋರಿಸಬಾರದು. ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.
ಡಾ. ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕೊಡಗು
ನಾಯಿ, ಬೆಕ್ಕು, ಕೋತಿ, ಹಸು ಸೇರಿದಂತೆ ಇತರೆ ಪ್ರಾಣಿಗಳ ಕಡಿತಕ್ಕೆ ಒಳಗಾದವರಿಗೂ ರೇಬಿಸ್ ನಿರೋಧಕ ಚಿಕಿತ್ಸಾಲಯದಲ್ಲಿ ಚಿಕಿತ್ಸೆ, ಲಸಿಕೆ ನೀಡಲಾಗುತ್ತದೆ. ಗಾಯದ ಆರೈಕೆ, ಅದರ ನಿರ್ವಹಣೆ, ಚಿಕಿತ್ಸೆ, ರೇಬಿಸ್ ನಿರೋಧಕ ಲಸಿಕೆ ನೀಡಲು ಇಲ್ಲಿ ಪ್ರತ್ಯೇಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಈ ಚಿಕಿತ್ಸಾಲಯದಲ್ಲಿ ಲಸಿಕೆ ಜತೆಗೆ ಇಮ್ಯುನೋ ಗ್ಲಾಬಿಯನ್ಸ್ನಂಥ ಔಷಧಗಳನ್ನೂ ನೀಡಲಾಗುತ್ತದೆ.
ಡಾ. ಕೆ. ಕೃತಿಕಾ, ನೋಡಲ್ ಅಧಿಕಾರಿ, ರೇಬಿಸ್ ನಿಯಂತ್ರಣ ಕಾರ್ಯಕ್ರಮ