

ದೇವದುರ್ಗ: ನಾಯಿ ಕಡಿತದಿಂದ ಬರುವು ರೇಬಿಸ್ ರೋಗದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ನಿರ್ಲಕ್ಷ್ಯ ಮಾಡಿದರೆ ಜೀವ ಹೋಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಹೇಳಿದರು.
ಇದನ್ನೂ ಓದಿ: ವಿಶ್ವ ರೇಬಿಸ್ ದಿನಾಚರಣೆ
ತಾಲೂಕಿನ ಗಣೇಕಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ರೇಬಿಸ್ ರೋಗ ಮಾರಕವಾಗಿದ್ದು, ಚುಚ್ಚು ಮದ್ದೇ ಇದಕ್ಕೆ ಪರಿಹಾರವಾಗಿದೆ. ನಿರ್ಲಕ್ಷ್ಯ ಮಾಡದೆ ಚುಚ್ಚುಮದ್ದು ಪಡೆಯಬೇಕು ಎಂದರು.
ರೇಬಿಸ್ ವೈರಾಣುವಿನಿಂದ ಹರಡುವ ಸೋಂಕಾಗಿದೆ. ಈ ರೋಗದ ಸೋಂಕಿರುವ ಪ್ರಾಣಿಗಳು ಕಚ್ಚಿದಾಗ ರೋಗ ಹರಡುತ್ತದೆ. ರೇಬಿಸ್ ರೋಗವಿರುವ ನಾಯಿ ಕಡಿತದಿಂದ ಶೇ.97, ಬೆಕ್ಕಿನಿಂದ ಶೇ.2, ನರಿ, ಮುಂಗೂಸಿ, ಕುದುರೆ, ಹಸು, ಕುರಿ, ಟಗರು ಕಡಿತದಿಂದ ಶೇ.1ರಷ್ಟು ರೋಗ ಹರಡಬಲ್ಲದು. ಜೊಲ್ಲಿನ ಸಂಪರ್ಕದಿಂದ ಗಾಯದ ಚರ್ಮದ ಮೇಲೆ ಸವರುವುದರಿಂದ ರೋಗ ಹರಡುತ್ತೆ ಎಂದರು.
ಈ ಪ್ರಾಣಿಗಳು ಕಚ್ಚಿದಾಗ ಯಾವುದೇ ಮನೆ ಔಷಧ, ಅರಿಷಿಣ, ಸುಣ್ಣ ಹಚ್ಚದೆ, ಕಚ್ಚಿದ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ಸ್ಪಿರಿಟ್ ಅಥವಾ ಆಯೋಡಿನ್‌ನಂತಹ ನಂಜು ನಿರೋಧಕವನ್ನು ಹಚ್ಚಬೇಕು. ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ಪಡೆದು ವೈದ್ಯರ ಸಲಹೆಯಂತೆ ಆರೋಗ್ಯ ಆರೈಕೆ ಮಾಡಿಕೊಳ್ಳಬೇಕು ಎಂದು ಶಿವಪ್ಪ ಭೂಮನಗುಂಡ ಹೇಳಿದರು.
ಮುಖ್ಯಶಿಕ್ಷಕ ಬಸವರಾಜ, ಎಸ್ಡಿಎಂಸಿ ಅಧ್ಯಕ್ಷ ಚನ್ನಯ್ಯ, ಶಿಕ್ಷಕರಾದ ಅನೀಲ್‌ಕುಮಾರ, ಸೌಮ್ಯ, ಕಸ್ತೂರಿ, ಯಲ್ಲಮ್ಮ, ಹುಸೇನ್‌ಬೀ, ಮುಮ್ತಾಜ್, ಆಶಾ ಕಾರ್ಯಕರ್ತೆಯರಾದ ಬಸಮ್ಮ, ರೇಣುಕಾ, ಭಾರತಿ, ಸದ್ದಾಂ ಗಣೇಕಲ್ ಇದ್ದರು.