

ಅರಕಲಗೂಡು: ವಿಶ್ವ ರೇಬೀಸ್ ಮುಕ್ತ ದಿನಾಚರಣೆ ಪ್ರಯುಕ್ತ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಕೃಷಿಕರಿಗೆ ರೇಬಿಸ್ ಕುರಿತು ಪಶು ವೈದ್ಯಕೀಯ ಇಲಾಖೆ ಅರಿವು ಮೂಡಿಸುತ್ತಿದೆ ಎಂದು ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿದೇಶಕ ಡಾ.ಎ.ಡಿ.ಶಿವರಾಮು ತಿಳಿಸಿದರು.
ತಾಲೂಕಿನ ಬೆಳವಾಡಿ ಸರ್ಕಾರಿ ಹಿರಿಯ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ರೇಬೀಸ್ ಕುರಿತು ಮಾಹಿತಿ ನೀಡಿ ಮಾತನಾಡಿ, ರೇಬಿಸ್ ರೋಗ ಹರಡುವ ವಿಧಾನ, ತಗುಲಿದ ಹಾಗೂ ಸಾಮಾನ್ಯ ನಾಯಿಗಳು ಕಚ್ಚಿದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಕ್ತ ಮಾಹಿತಿ ನೀಡಲಾಗುತ್ತಿದೆ. ಸಾಕು ಪ್ರಾಣಿಗಳು, ಬೀದಿ ನಾಯಿಗಳು ಕಚ್ಚಿದಾಗ ಅದನ್ನು ನಿರ್ಲಕ್ಷಿಸುವುದು ಅಥವಾ ನಾಟಿ ವೈದ್ಯರ ಮೊರೆ ಹೋಗದೆ ಕೂಡಲೇ ವೈದ್ಯರಿಗೆ ತೋರಿಸಿ ಅಗತ್ಯ ಚಿಕಿತ್ಸೆ ಮತ್ತು ಚುಚು ್ಚಮದ್ದುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೆ. 27ವೆರೆಗೆ ಶಾಲಾ ಭೇಟಿ ನಡೆಯಲಿದ್ದು, ಸೆ. 28ರಿಂದ ಸಾಕು ಪ್ರಾಣಿಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳನ್ನು ಸಮೀಪದ ಪಶು ಆಸ್ಪತ್ರೆಗೆ ಕರೆದೊಯ್ದು ಲಸಿಕೆ ಹಾಕಿಸುವ ಮೂಲಕ ರೇಬೀಸ್ ಮುಕ್ತಗೊಳಿಸುವ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.