ಕೊಪ್ಪಳ ಒಲಿದ ರಾಬಕೊವಿ ಅಧ್ಯಕ್ಷ ಸ್ಥಾನ

Published on

ಬಳ್ಳಾರಿ : ತೀವ್ರ ಕುತೂಹಲ ಕೆರೆಳಿಸಿದ್ದ ಇಲ್ಲಿನ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರೀಕ್ಷೆಯಂತೆ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.

ಕಳೆದ ಎರಡು ವರ್ಷದ ಹಿಂದಯೇ ಒಕ್ಕೂಟದ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿತ್ತು. ಕೋರ್ಟ್ ಮೆಟ್ಟಲೇರಿ ಬಳಿಕ ನಿರ್ದೆಶಕ ಸ್ಥಾನಕ್ಕೆ ಚುನಾವಣೆ ನಡೆಯಿತು.

ಕಚೇರಿಯಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬೆಳಗ್ಗೆ 9 ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್, ಎನ್.ಸತ್ಯನಾರಾಯಣ ನಾಮಪತ್ರ ಸಲ್ಲಿಸಿದರು. ಪ್ರತಿಸ್ಪರ್ಧಿಯಾಗಿ ಯಾವ ನಿರ್ದೇಶಕರು ಸಲ್ಲಿಸದೆ ಇದ್ದರಿಂದ ರಾಘವೇಂದ್ರ ಹಿಟ್ನಾಳ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪಿ.ಪ್ರಮೋದ್ ಆದೇಶ ಹೊರಡಿಸಿದರು.

ನಿರೀಕ್ಷೆಯಂತೆ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿಯ ಕೆಲ ಬೆಂಬಲಿಗರು ಹಾಗೂ ಅಭಿಮಾನಿಗಳು ಆವರಣದಲ್ಲಿಯೇ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಒಕ್ಕೂಟದ ಸದಸ್ಯರು ಹಾರ ಹಾಕಿ ಸನ್ಮಾನಿಸಿದರು.

ಮಾಜಿ ಅಧ್ಯಕ್ಷರಿಗೆ ಟಕ್ಕರ್ : ಈ ಬಾರಿಯೂ ಒಕ್ಕೂಟದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಭೀಮಾನಾಯ್ಕ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿನಿಂದ ಅಖಂಡ ಜಿಲ್ಲೆಯ ನಾಲ್ಕು ನಿರ್ದೇಶಕ ಸ್ಥಾನಗಳಿಗೂ ವಿಜಯನಗರ ಜಿಲ್ಲೆಯವರನ್ನೇ ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶ್ವಸಿಯಾಗಿದ್ದರು. ಜತೆಗೆ ರಾಯಚೂರು ಜಿಲ್ಲೆಯ ನಾಲ್ವರಲ್ಲಿ ಇಬ್ಬರು ಭೀಮಾನಾಯ್ಕ ಅವರ ಬೆಂಬಲಿಗರ ಎಂಬ ಮಾತುಗಳು ಕೇಳಿ ಬಂದಿದ್ದವು. ಒಂದೇ ಪಕ್ಷದಲ್ಲಿದ್ದರೂ ರಾಘವೇಂದ್ರ ಹಿಟ್ನಾಳ್ ಹಾಗೂ ಭೀಮಾನಾಯ್ಕ ನಡುವೆ ಅಂತರಿಕವಾಗಿ ಸವಾಲು ಏರ್ಪಟಿತ್ತು. ಆದ್ದರಿಂದ, ರಾಜ್ಯ ಸರ್ಕಾರ ಈಚೆಗೆ ಯಲಬುರ್ಗದ ಹಂಪಯ್ಯ ಹಿರೇಮಠ ಅವರನ್ನು ರಾಬಕೊವಿ ಒಕ್ಕೂಟದ ನಾಮನಿರ್ದೇಶಿತ ನಿರ್ದೇಶಕರನ್ನಾಗಿ ನೇಮಿಸಿತು. ಆದರೆ, ಎರಡು ದಿನಗಳ ಹಿಂದೆ ಹಂಪಯ್ಯ ಹಿರೇಮಠ ಅವರ ಆದೇಶವನ್ನು ರದ್ದುಗೊಳಿಸಿ, ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸಿ ಆದೇಶಿ ಹೊರಡಿಸಿದ ಪರಿಣಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಭೀಮಾನಾಯ್ಕ ಲೆಕ್ಕಚಾರಗಳೆಲ್ಲವೂ ತಲೆಕೆಳದಂತಾಯಿತು. ಇದರಿಂದ ಮಾಜಿ ಅಧ್ಯಕ್ಷರಿಗೆ ಕೊನೆಯಲ್ಲಿ ಹಿಟ್ನಾಳ್ ಬಣ ಟಕ್ಕರ್ ನೀಡುವಲ್ಲಿ ಯಶ್ವಸಿಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net