ಉಮಾಶ್ರೀ ಮನೆಯಲ್ಲಿ 2 ಲಕ್ಷ ರೂ. ಕಳ್ಳತನ

Umashress
Published on

ರಬಕವಿ/ಬನಹಟ್ಟಿ: ರಬಕವಿ ವಿದ್ಯಾನಗರದಲ್ಲಿರುವ ತಮ್ಮ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವೆ ಉಮಾಶ್ರೀ ಅವರು ಸೋಮವಾರ ರಾತ್ರಿ ಬೆಂಗಳೂರಿನಿಂದ ಆಗಮಿಸಿ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮನೆಯ ಬೆಡ್ ರೂಮಿನಲ್ಲಿನ ಟ್ರೇಜರಿಯ ಕಪಾಟು ಒಡೆದು ಕಳ್ಳರು 2 ಲಕ್ಷ ರೂ. ಹಣ ದೋಚಿದ್ದಾರೆ ಎಂದು ಉಮಾಶ್ರೀ ದೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಭದ್ರತೆ ದೃಷ್ಟಿಯಿಂದ ಪೊಲೀಸರು ನಗರದ ಹೊರ ವಲಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಬೇಕಾಗಿತ್ತು. ಆದರೆ ಯಾವುದನ್ನೂ ಮಾಡಿಲ್ಲ. ಮಾಜಿ ಶಾಸಕಿ, ಮಾಜಿ ಸಚಿವೆ ಮನೆಯೇ ಹೀಗಾದರೆ ಇನ್ನೂ ಸಾಮಾನ್ಯ ಜನರ ಮನೆಯ ಸ್ಥಿತಿ ಹೇಗೆ ಎಂಬ ಭಯ ಸಾರ್ವಜನಿಕರಲ್ಲಿ ಉಂಟಾಗುತ್ತದೆ. ಇಷ್ಟು ದಿನ ಈ ಪ್ರದೇಶದಲ್ಲಿ ಯಾವುದೇ ಇಂತಹ ಪ್ರಕರಣ ನಡೆದಿರಲಿಲ್ಲ. ಈಗ ಪ್ರಾರಂಭವಾಗಿದೆಯೆಂದರೆ ಪೊಲೀಸ್ ಇಲಾಖೆಯವರು ಸ್ವಲ್ಪ ಜಾಗೃತರಾಗಬೇಕು. ಕೋವಿಡ್-19 ಬಂದಿರುವುದರಿಂದ ಕಡುಬಡವರು ಕಳ್ಳತನ, ದರೋಡೆ ಮಾಡುವ ಸಾಧ್ಯತೆಗಳು ಇನ್ನು ಮುಂದೆ ಹೆಚ್ಚಾಗಬಹುದು. ಆದ್ದರಿಂದ ಪೊಲೀಸ್ ಇಲಾಖೆಯವರು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ತೇರದಾಳ ಪಿಎಸ್‌ಐ ವಿಜಯ ಕಾಂಬಳೆ ಸುದ್ದಿಗಾರರ ಜತೆ ಮಾತನಾಡಿ, ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿ ಪಟ್ಟಣದ ವಿದ್ಯಾನಗರದಲ್ಲಿ ಭಾನುವಾರ ಮಧ್ಯರಾತ್ರಿ ಮಾಜಿ ಸಚಿವೆ ಉಮಾಶ್ರೀ ಅವರ ಮನೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಸಿಪಿಐ ಜೆ.ಕರುಣೇಶಗೌಡ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net