

ರಬಕವಿ-ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದೊಂದು ವಾರದಿಂದ ರಾಜಾಪುರ, ಕಾಳಮ್ಮವಾಡಿ ಜಲಾಶಯದಿಂದ ಬಿಟ್ಟ ಹೆಚ್ಚುವರಿ ನೀರು ಶನಿವಾರ ಸಂಜೆ ರಬಕವಿ ಮಹಿಷವಾಡಗಿ ಸೇತುವೆ ಮೂಲಕ ಹಿಪ್ಪರಗಿ ಜಲಾಶಯದತ್ತ ಸಾಗುತ್ತಿದೆ.
ಜನತೆ ನಿರಾಳ: ನಗರದಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಹಾರಾಷ್ಟ್ರದಿಂದ ಹರಿಬಿಟ್ಟ ನೀರು ಹಿಪ್ಪರಗಿ ಜಲಾಶಯದತ್ತ ತೆರಳುತ್ತಿದ್ದು, ಈಗ ನೀರು ಪೂರೈಸುವ ಪಂಪ್‌ಗಳು ಕಾರ್ಯಾರಂಭ ಮಾಡಿದ್ದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಕೃಷ್ಣೆ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿತ್ತು. ಇದೀಗ ಕೃಷ್ಣೆಯ ಒಡಲು ತುಂಬಿಕೊಂಡಿದ್ದರಿಂದಾಗಿ ನೀರಿನ ಸಮಸ್ಯೆ ನೀಗಿದಂತಾಗಿದೆ. ಈಗ ರಬಕವಿ ಮಹಿಷವಾಡಗಿ ಸೇತುವೆಯಲ್ಲಿ ಸದ್ಯ 1ಟಿಂಎಂಸಿಯಷ್ಟು ನೀರು ಸಂಗ್ರಹವಾಗಿ ಕೆಳಭಾಗದಲ್ಲಿ ಹರಿದು ಹೋಗುತ್ತಿದೆ. ದಿನ ದಿನಕ್ಕೆ ಹರಿದು ಬರುವ ನೀರಿನ ಪ್ರಮಾಣವೂ ಏರಿಕೆ ಆಗಿದ್ದರಿಂದ ರೈತರಲ್ಲಿ ಸಂತಸ ತಂದಿದೆ.