

ರಬಕವಿ/ಬನಹಟ್ಟಿ: ಸರ್ಕಾರದ ಯಾವುದೇ ಕೆಲಸಗಳಿದ್ದರೂ ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ಹಿಪ್ಪರಗಿ ಸೇತುವೆ ಮುಂಭಾಗದಲ್ಲಿ ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೀನು ಮರಿ ಬಿಡುವ ಕಾರ್ಯಕ್ರಮ ನಿಮಿತ್ತ ಶನಿವಾರ ಆಲಮಟ್ಟಿ ಹಿನ್ನೀರಿಗೆ ಮೀನು ಮರಿ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಪ್ಪರಗಿ ಸೇತುವೆ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿರಂತರವಾಗಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೆ, ಹರಿಯುವ ನೀರಿನಲ್ಲಿ ಮಾತ್ರ ಮೀನಿನ ಸಂತಾನೋತ್ಪತ್ತಿಯಾಗುತ್ತದೆ. ಹಿನ್ನೀರಿನಲ್ಲಿ ಮೀನಿನ ಸಂತಾನೋತ್ಪತ್ತಿ ಅಷ್ಟೊಂದು ಪ್ರಮಾಣದಲ್ಲಿ ಆಗಲ್ಲ. ಹೀಗಾಗಿ ಇಲಾಖೆ ಬೇರೆಡೆಯಿಂದ ಮೀನಿನ ಮರಿಗಳನ್ನು ತಂದು ಬಿಡುತ್ತಿದೆ ಎಂದರು.
ಮೀನುಗಾರಿಕೆ ಇಲಾಖೆಯಿಂದ ಒಟ್ಟು 2.5 ಲಕ್ಷ ಮರಿಗಳನ್ನು ತರಲಾಗಿದೆ. ಪ್ರತಿಯೊಂದು ಮರಿ 80 ಎಂ.ಎಂ. ಗಾತ್ರದಿಂದ 3 ಇಂಚಿನವರೆಗೆ ಇದ್ದು ಮೂರ‌್ನಾಲ್ಕು ತಿಂಗಳಲ್ಲಿ ಅಂದಾಜು 4 ರಿಂದ 6 ಕೆಜಿ ತೂಕದವರೆಗೆ ಬೆಳೆಯುತ್ತದೆ. ಇದರಿಂದ ಈ ಭಾಗದಲ್ಲಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.
ಮೀನುಗಾರಿಕೆ ಈಗ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮೀನಿನ ಮರಿ ಬಿಡುವುದರಿಂದ ಈ ಭಾಗದಲ್ಲಿ ಮೀನುಗಳ ಸಂಖ್ಯೆ ವೃದ್ಧಿಯಾಗಲಿದೆ. ಈ ಭಾಗದ ಮೀನುಗಳಿಗೆ ಬೇಡಿಕೆಯೂ ಹೆಚ್ಚಿದೆ ಎಂದರು.
ಜಿಪಂ ಸದಸ್ಯ ಪುಂಡಲೀಕ ಪಾಲಭಾಂವಿ, ಆನಂದ ಕಂಪು, ಪ್ರಕಾಶ ಭಜಂತ್ರಿ, ಸಂಜು ಮಗದುಮ್, ಚನ್ನಯ್ಯ ಮಠಪತಿ ಸೇರಿ ಅನೇಕರಿದ್ದರು.