

ರಬಕವಿ/ಬನಹಟ್ಟಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೊನಾ ಹಾವಳಿಯಿಂದ ಗುಡ್ಡಾಪುರ ದಾನಮ್ಮದೇವಿ ದರ್ಶನಕ್ಕೆ ಇನ್ನೂ ಅವಕಾಶ ಕಲ್ಪಿಸಿಲ್ಲ. ಉತ್ತರ ಕರ್ನಾಟಕದ ಬಹುಪಾಲು ದಾನಮ್ಮ ದೇವಿ ಭಕ್ತರು ಅಧಿಕ ಮಾಸದಲ್ಲಿ ದೇವಿ ದರ್ಶನ ಪಡೆಯಬೇಕೆಂಬ ಹಂಬಲ ಭಕ್ತರಲ್ಲಿರುತ್ತದೆ. ಕರೊನಾ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲೂ ಗುಡ್ಡಾಪುರ ದಾನಮ್ಮದೇವಿ ದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ದೂರದ ಊರುಗಳಿಂದ ಭಕ್ತರು ಬರಬಾರದು. ದೇವಸ್ಥಾನದ ಎಲ್ಲ ಬಾಗಿಲುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಆದೇಶದಂತೆ ಅತಿ ಕಟ್ಟು ನಿಟ್ಟಾಗಿ ಪ್ರತಿದಿನ ಮೂರು ಸಮಯ ಮಾತ್ರ ದೇವಿ ಪೂಜೆಯನ್ನು ಗರ್ಭಗುಡಿಯಲ್ಲಿ ಪೂಜಾರಿಯೊಬ್ಬರೇ ಮಾಡುತ್ತಾರೆ. ಕೋವಿಡ್-19 ನಿಯಮಾವಳಿ ಸಡಿಲ ಆಗುವವರೆಗೆ ಭಕ್ತರು ದೇವಿ ದರ್ಶನಕ್ಕೆ ಬರಬಾರದೆಂದು ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.