

ರಬಕವಿ/ಬನಹಟ್ಟಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರಿಗೆ ಅನ್ಯಾಯ ಮಾಡುತ್ತಿವೆ. ರೈತರ ಪರವಾಗಿ ಸರ್ಕಾರಗಳು ನಿಲ್ಲದಿದ್ದರೆ ಸರ್ಕಾರಗಳನ್ನೆ ಬದಲಿಸುವ ಶಕ್ತಿ ಅನ್ನದಾತರಿಗೆ ಇದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ ಎಚ್ಚರಿಕೆ ನೀಡಿದರು.
ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಅವಳಿ ನಗರದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಾಗ ವಿರೋಧ ಪಕ್ಷದ ಹಾಗೂ ರೈತರನ್ನು ಲೆಕ್ಕಿಸದೆ ಏಕಪಕ್ಷೀಯವಾಗಿ ಅಂಗೀಕಾರಗೊಳಿಸಿದ್ದನ್ನು ನಾವು ಖಂಡಿಸುತ್ತೇವೆ. ಕಾಯ್ದೆ ಹಿಂಪೆಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಮೊದಲು ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿದ ಗಂಗಾಧರ ಮೇಟಿ ತಂಡದವರು ಬನಹಟ್ಟಿಯ ಗಾಂಧಿ ವೃತ್ತದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು. ಬಸವಂತರಾವ ಕಾಂಬಳೆ ತಂಡದವರು ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ರಾಂಪುರ-ರಬಕವಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಗೀರಥ ವೃತ್ತದಲ್ಲಿ ಕೆಲ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ಕನ್ನಡಪರ ಸಂಘಟನೆಗಳು, ಜೆಡಿಎಸ್, ಕಾಂಗ್ರೆಸ್ ಹಾಗೂ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಡಾ.ಪದ್ಮಜೀತ ನಾಡಗೌಡಪಾಟೀಲ, ನೇಕಾರ ಮುಖಂಡ ಸಿದ್ದಲಿಂಗ ಟಿರ್ಕಿ, ಸಿದ್ದಪ್ಪ ಕೊಣ್ಣೂರ, ಬಸವರಾಜ ಕೊಕಟನೂರ, ನಾರಾಯಣ ನಿಕ್ಕಂ, ದೇವೇಂದ್ರ ಅಸ್ಕಿ, ಮಲ್ಲಪ್ಪ ಸಿಂಗಾಡಿ, ಡಿ.ಎಸ್. ಪಟ್ಟಣಶೆಟ್ಟಿ, ಪ್ರಕಾಶ ಸಣಕಲ್, ಹೊನ್ನಪ್ಪ ಬಿರಡಿ, ಡಾ.ಎ.ಆರ್. ಬೆಳಗಲಿ, ಶಂಕರ ಸೊರಗಾಂವಿ, ಮಾಯಪ್ಪ ತುರಾದಿ, ಸಿದ್ದು ಉಳ್ಳಾಗಡ್ಡಿ, ಕಾಡು ಪಾಟೀಲ, ರಾಮಣ್ಣ ಮಲ್ಲೋಡಿ, ಸಿದ್ದಪ್ಪ ಮಲ್ಲೋಡಿ, ಕಲ್ಲಪ್ಪ ಬಳಗಾರ, ಸಿದ್ದಪ್ಪ ಲದ್ದಿ, ಯಲ್ಲಪ್ಪ ಕರಿಗಾರ ಇತರರು ಇದ್ದರು. ರಾಜ್ಯ ಸಾರಿಗೆ ಬಸ್, ಟಂಟಂ, ಹೋಟೆಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
EndFragment