ನೇಕಾರರಿಗೆ ಸೌಲಭ್ಯ ಒದಗಿಸಿ

RBK 24-2
Published on

ರಬಕವಿ/ಬನಹಟ್ಟಿ: ರಾಜ್ಯದ ಪ್ರತಿಯೊಬ್ಬ ನೇಕಾರರ ಸಮಸ್ಯೆಗೂ ನಾನು ಸ್ಪಂದಿಸುತ್ತೇನೆ, ನನಗೆ ನೇಕಾರರು ಹಾಗೂ ರೈತರು ಎರಡು ಕಣ್ಣುಗಳು ಇದ್ದಹಾಗೆ. ಅವರ ಅಭಿವೃದ್ಧಿಗಾಗಿ ಸರ್ಕಾರ ಸದಾ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನೇಕಾರರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವೃತ್ತಿಪರ ನೇಕಾರರು ಹಾಗೂ ರಾಜ್ಯದ ಸ್ವಾಮೀಜಿಗಳನ್ನು ಮಂಗಳವಾರ ಕರೆಸಿ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.

ರಾಜ್ಯ ನೇಕಾರ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ನೇಕಾರರಿಗೆ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕು. ಈಗಿರುವ ಯೋಜನೆಗಳು ಸಮರ್ಪಕವಾಗಿ ಕೂಡಲೇ ಜಾರಿಯಾಗಬೇಕು. ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯಗಳನ್ನು ನೇಕಾರರಿಗೂ ಜಾರಿ ಮಾಡಬೇಕು ಎಂಬುದು ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಹಳೇ ಹುಬ್ಬಳ್ಳಿ ವೀರಭಿಕ್ಷಾವತಿಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನೇಕಾರ ನಿಗಮದ ಅಧ್ಯಕ್ಷ ಸ್ಥಾನವನ್ನು ನೇಕಾರ ಸಮುದಾಯಕ್ಕೆ ಕೊಡದೆ ಇರುವುದು ನಮಗೆ ವಂಚನೆಯಾಗಿದೆ ಎಂದು ನೇರವಾಗಿ ಸಿಎಂ ಎದುರು ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ನಾವು ನೇಕಾರ ಮತ್ತು ರೈತರ ಪರವಾಗಿದ್ದು, ಸ್ವಾಮೀಜಿಗಳು ಹಾಗೂ ಸಮುದಾಯದೊಂದಿಗೆ ನಾನು ಸದಾ ಇರುತ್ತೇನೆ. ನೇಕಾರರಿಗೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಶ್ರೀ ಘನಲಿಂಗ ಸ್ವಾಮೀಜಿ ಹಾಗೂ ಶ್ರೀ ರೇವಣಸಿದ್ಧ ಸ್ವಾಮಿಗಳು, ಶಿವಶಂಕರ ಶಿವಾಚಾರ್ಯರು ಸೇರಿ ಇತರರು ಮುಖ್ಯಮಂತ್ರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net