ನಾಮಸ್ಮರಣೆಯಲ್ಲಿ ಅಡಗಿದೆ ಅಪಾರ ಶಕ್ತಿ

RBK 131
Published on

ರಬಕವಿ/ಬನಹಟ್ಟಿ: ಯಜ್ಞಗಳಲ್ಲಿ ಶ್ರೇಷ್ಠ ಹಾಗೂ ಸರಳವಾದುದು ಕೋಟಿ ಜಪಯಜ್ಞ. ದೇವರ ಆಕಾರದ ಶಕ್ತಿಗಿಂತ ನಾಮಸ್ಮರಣೆಯಲ್ಲಿರುವ ಶಕ್ತಿ ಅಪಾರವಾದುದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಂಡಿಗಣಿ ಬಸವ ಗೋಪಾಲ ನೀಲಮಾಣಿಕ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಏಳು ದಿನ ಜರುಗಿದ ಕೋಟಿ ಜಪಯಜ್ಞ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಎಲ್ಲ ಮಠಗಳು ಸ್ಥಳದಲ್ಲಿ ಮಾತ್ರ ದಾಸೋಹ ನಡೆಸಬಹುದು. ಆದರೆ, ಬಂಡಿಗಣಿ ದಾನೇಶ್ವರರು ವಿಶಿಷ್ಟವಾದ ಪರಂಪರೆ ವರ್ಷದ 300 ದಿನ ರಾಜ್ಯ, ಹೊರ ರಾಜ್ಯಗಳಲ್ಲಿ ಉಣ್ಣುವ ಭಕ್ತರಿದ್ದಲ್ಲೇ ಹೋಗಿ ಪಂಚಾಮೃತ ಅಡುಗೆ ಮಾಡಿಸಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಮುಂದಿನ ದಿನಗಳಲ್ಲಿ ದಶ ದಿಕ್ಕುಗಳಲ್ಲಿ ಬಂಡಿಗಣಿ ಮಠದ ಕೀರ್ತಿ ಹಬ್ಬಿ ಉತ್ತರೋತ್ತರವಾಗಿ ಬೆಳೆಯುತ್ತದೆ. ಅನೇಕ ಕಡೆ ಒಂದೇ ದೇವರನ್ನು ಪೂಜಿಸುವ ಸಂಪ್ರದಾಯ ಅಳವಡಿಸಿಕೊಂಡಿರುತ್ತಾರೆ. ಆದರೆ, ಬಂಡಿಗಣಿಯಲ್ಲಿ ಸರ್ವ ದೇವರನ್ನು ಪೂಜಿಸಿ ಮೂಲ ದೇವರ ಸ್ವರೂಪ ಸರ್ವಧರ್ಮ ಸಮಾನತೆ ಎಲ್ಲರನ್ನು ಒಂದುಗೂಡಿಸುವ ಜಾತ್ಯತೀತ ಮಠ ಹಾಗೂ ಧಾರ್ಮಿಕ ಕೇಂದ್ರ ಬಿಂದುವಾಗಿ ಹೊರಹೊಮ್ಮತ್ತಿದೆ ಎಂದರು.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕಿ ಮೀನಾಕ್ಷಿ ನೆಲಗಳ್ಳಿ ಮಾತನಾಡಿದರು. ಅಂಬಿಕಾನಂದ ಶ್ರೀಗಳು, ಮಲ್ಲಿಕಾರ್ಜುನ ಭೃಂಗಿಮಠ, ಶ್ರೀಶೈಲ ಶಾಸ್ತ್ರಿಗಳು, ಶಾಂತಮ್ಮ ತಾಯಿ ಬಿಲಕುಂದಿ, ಅಡವಯ್ಯ ಅರಳಿಕಟ್ಟಿಮಠ, ಶಿವಪ್ಪ ಬಾಗಲಕೋಟ, ಚನ್ನಪ್ಪ ನಿಂಬರಗಿ ಮತ್ತಿತರರು ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net