ಮಾತೃ ಭಾಷೆಯಲ್ಲಿಯೇ ವ್ಯವಹರಿಸಿ

RBK 30-1
Published on

ರಬಕವಿ/ಬನಹಟ್ಟಿ: ತಾಲೂಕಿನ ಬ್ಯಾಂಕ್‌ಗಳಲ್ಲಿರುವ ಕನ್ನಡಿಗರು ಹಾಗೂ ಕನ್ನಡೇತರರ ವಿವರ ಪಡೆದು ಐದಾರು ತಿಂಗಳಲ್ಲಿ ಕನ್ನಡ ಕಲಿಯುವಂತೆ ಸೂಚಿಸಬೇಕು. ಆಗಲೂ ಕನ್ನಡ ಬಳಸದಿದ್ದರೆ ಅಂಥವರ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಂಘಟನೆಗಳಿಂದ ಮಂಗಳವಾರ ವಿವಿಧ ಬ್ಯಾಂಕ್‌ಗಳಿಗೆ ತೆರಳಿ ಹಕ್ಕೊತ್ತಾಯ ಮಾಡಲಾಯಿತು.

ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಪ್ರಮುಖ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಗೆ ಮನವಿ ನೀಡಲಾಯಿತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ವಿನೋದ ಲೋಣಿ ಮಾತನಾಡಿ, ವ್ಯವಹಾರ, ಧನಾದೇಶ, ಠೇವು, ಸುತ್ತೋಲೆ ಸೇರಿ ಕನ್ನಡಿಗರಿಗೆ ಸಹಕಾರಿಯಾಗುವ ರೀತಿಯಲ್ಲಿ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕೆಂದು ಹೇಳಿದರು.

ಮುಖಂಡ ಮಹಾಲಿಂಗಪ್ಪ ಕರಡಿ ಮಾತನಾಡಿ, ಕಳೆದೆರಡು ವರ್ಷಗಳ ಹಿಂದೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯನವರ ಆದೇಶದಂತೆ ಕನ್ನಡ ಅನುಷ್ಠಾನ ಕುರಿತು ಪರಿಶೀಲನಾ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದ್ದರೂ ಪ್ರಯೋಜನವಾಗದಿರುವುದು ವಿಪರ್ಯಾಸದ ಸಂಗತಿಯೆಂದು ಬೇಸರ ವ್ಯಕ್ತಪಡಿಸಿದರು.

ಕಸಾಪ ತಾಲೂಕಾಧ್ಯಕ್ಷ ವೀರೇಶಕುಮಾರ ಆಸಂಗಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಗುಣಕಿ, ಕರ್ನಾಟಕ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ, ಸಂಜಯ ತೆಗ್ಗಿ, ಮಹೇಶ ನಾಗರಾಳ, ಪ್ರಕಾಶ ಹುಣಶ್ಯಾಳ, ಪ್ರಕಾಶ ಕುಂಬಾರ, ಮೋಹನ ಹೆಗ್ಗನ್ನವರ, ಬಾಬು ಗಂಗಾವತಿ, ವಿಶ್ವನಾಥ ಸವದಿ, ಬಸವರಾಜ ಅಮ್ಮಣಗಿಮಠ, ಪ್ರಸನ್ನ ಮಮದಾಪುರ, ಗಿರಮಲ್ಲಪ್ಪ ಜಂಬಗಿ, ಅಶೋಕ ಕಾಂಬಳೆ ಸೇರಿ ಅನೇಕ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net