ರಾಗಿ ಖರೀದಿ ನೋಂದಣಿ ಕಗ್ಗಂಟು

raagi
raagi registration
Published on

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೊಡ್ಡಬಳ್ಳಾಪುರ
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಕಗ್ಗಂಟಾಗಿದ್ದು, ರಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ. ಡಿ.1ರಿಂದಲೇ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಆದರೆ ಎರಡು ವಾರ ಕಳೆದರೂ ನೋಂದಣಿ ಪ್ರಕ್ರಿಯೆ ಆರಂಭವಾಗದಿರುವುದು ರೈತಾಪಿ ವರ್ಗದಲ್ಲಿ ಗೊಂದಲ ಮೂಡಿಸಿದೆ.
ಸರ್ಕಾರ ಇದೇ ಮೊದಲ ಬಾರಿಗೆ ರೈತರಿಂದ ಬೆರಳಚ್ಚು ಪಡೆದು ಹೆಸರು ನೋಂದಣಿ ಮಾಡಿಕೊಳ್ಳಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಇದು ಪರಿಶೀಲನೆಯ ಹಂತದಲ್ಲಿರುವುದರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲು ತೊಡಕಾಗಿದೆ ಎನ್ನಲಾಗಿದ್ದು, ಬರದ ನಡುವೆಯೂ ರಾಗಿ ಬೆಳೆದ ರೈತರು ಬೆಂಬಲ ಬೆಲೆಯಡಿ ಮಾರಾಟ ಮಾಡಲು ಮತ್ತೇನು ಸಂಕಷ್ಟ ಎದುರಾಗಲಿದೆಯೋ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ವರ್ಷ ವರ್ಷವೂ ಗೊಂದಲ:
ನೋಂದಣಿ ಪ್ರಕ್ರಿಯೆ ಸೇರಿ ರಾಗಿ ಖರೀದಿ ಪ್ರಕ್ರಿಯೆಯಲ್ಲೂ ಪ್ರತಿ ವರ್ಷ ಒಂದಿಲ್ಲೊಂದು ಗೊಂದಲ ಏರ್ಪಡುವುದು ಸಾಮಾನ್ಯವಾಗಿದೆ. ರಾಗಿ ಖರೀದಿ ಕೇಂದ್ರಗಳ ಆರಂಭದಿಂದ ಹಿಡಿದು ಖರೀದಿ ಪ್ರಕ್ರಿಯೆ, ರೈತರಿಗೆ ಮೂಲಸೌಕರ್ಯ ಕೊರತೆ, ಇಂಟರ್‌ನೆಟ್ ಕಾಟ ಸೇರಿ ಹಲವು ಸಮಸ್ಯೆ ಎದುರಿಸುವುದು ಕಂಡುಬರುತ್ತಿದೆ.
ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ರೈತರು ‘ಫ್ರೂಟ್ಸ್’ ಐಡಿ ಸಂಖ್ಯೆ ನೀಡಿ ನೋಂದಣಿ ಮಾಡಿದ ಸಮಯದಲ್ಲಿ ಚೀಟಿಯಲ್ಲಿ ನೀಡಲಾಗುವ ನಿಗದಿತ ದಿನಾಂಕದಂದು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಬಹುದಾಗಿತ್ತು. ಆದರೆ ಇದೇ ಪ್ರಥಮ ಬಾರಿಗೆ ಪಹಣಿಯಲ್ಲಿ(ಆರ್‌ಟಿಸಿ) ಹೆಸರು ಇರುವ ರೈತರೇ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಹೆಸರು ನೋಂದಣಿ ಮಾಡಿಸಬೇಕಿದೆ. ಈ ಹೊಸ ನಿಯಮ ಜಾರಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ.
31ರವರೆಗೆ ಮಾತ್ರ:
ಬೆಂಬಲ ಬೆಲೆ ಯೋಜನೆಯಡಿ ಡಿ.1ರಿಂದ ರಾಗಿ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿತ್ತು. ಪ್ರತಿ ಕ್ವಿಂಟಲ್ ರಾಗಿಗೆ 3,846 ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದ್ದು, ಹೆಸರು ನೋಂದಣಿ ಮಾಡಿಸಿರುವ ರೈತರಿಂದ ಜ. 1ರಿಂದ ಮಾರ್ಚ್ 31ರವರೆಗೆ ಮಾತ್ರ ರಾಗಿ ಖರೀದಿಸಲಾಗುವುದು ಎಂದು ತಿಳಿಸಿತ್ತು. ಆದರೆ ನೋಂದಣಿ ಪ್ರಕ್ರಿಯೆಯೇ ಆರಂಭವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net