ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ. ಬೆಂಬಲ ಬೆಲೆ

raagi
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಅ.1 ರಿಂದ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ರೈತರು ಹತ್ತಿರದ ನೋಂದಣಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಇಲಾಖೆಯ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ 2025-26 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ.ಗಳ ಬೆಲೆ ನಿಗದಿ ಪಡಿಸಿದೆ. ಅ.1 ರಿಂದ ಡಿ.15 ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. 2026 ಜನವರಿ 1 ರಿಂದ ಮಾ. 31 ರ ಅವಧಿಯವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆಹಾರ ನಿಗಮ ಏಜೆನ್ಸಿ:

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಏಜೆನ್ಸಿ ಆಗಿ ನೇಮಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ನಿಗಮದ ಉಪ ಏಜೆನ್ಸಿಗಳು ಸಹಯೋಗದಲ್ಲಿ ನೋಂದಣಿ ಪ್ರಕ್ರಿಯೆ ಬಯೋಮೆಟ್ರಿಕ್ ಆಧಾರದಲ್ಲಿ ನಡೆಯುವುದರಿಂದ ಅವಶ್ಯಕತೆ ಇರುವ ಟೇಬಲ್, ಕುರ್ಚಿ, ಕಂಪ್ಯೂಟರ್, ಸಿಬ್ಬಂದಿ, ವಿದ್ಯುತ್ ಸಂಪರ್ಕ, ಇಂಟರ್ನೆಟ್, ತೂಕದ ಯಂತ್ರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಇದರ ಜತೆಗೆ ರೈತರಿಗೆ ಕುಡಿಯುವ ನೀರು, ಶೌಚಗೃಹ ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ರಾಗಿ ನೋಂದಣಿ ಹಾಗೂ ಖರೀದಿ ಸ್ಥಳದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಬೇಕು ಅಧಿಕಾರಿಗಳು ಈ ಬಗ್ಗೆ ಪೂರ್ವ ಸಿದ್ದತೆ ಮಾಡಿಕೊಂಡಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಾಗಿ ಖರೀದಿ ಸ್ಥಳಗಳಲ್ಲಿ ಕೆಲವೊಂದು ಸಮಸ್ಯೆಗಳ ಆಗಾಗ ದೂರು ಕೇಳಿಬರುತ್ತಿರುತ್ತದೆ, ನಂತರದಲ್ಲಿ ಸರಿಪಡಿಸುವ ಬದಲಿಗೆ ಅಚ್ಚುಕಟ್ಟಾಗಿ ಪೂರ್ವ ಸಿದ್ದತೆ ಮಾಡಿಕೊಂಡರೆ ಇಂಥ ಸಮಸ್ಯೆ ಉದ್ಬವಿಸುವುದಿಲ್ಲ. ಆದ್ದರಿಂದ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರೂಟ್ಸ್ ಐಡಿಗೆ ನೋಂದಾಯಿಸಿಕೊಳ್ಳಿ:

ರೈತರು ಬೆಳೆದಿರುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಫ್ರೂಟ್ಸ್ ದತ್ತಾಂಶದಿಂದ ಮಾಹಿತಿ ಪಡೆಯಲಾಗುತ್ತದೆ ಹಾಗಾಗಿ ನೋಂದಣಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದ್ದು ಐಡಿ ಇಲ್ಲದ ರೈತರು ಕೃಷಿ ಇಲಾಖೆಯ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪ್ರೂಟ್ಸ್ ಐಡಿ ಪಡೆದು ನೋಂದಣಿ ಮಾಡಿಕೊಳ್ಳಬೇಕು ಎಂದು ಸಯಿದಾ ಆಯಿಷಾ ತಿಳಿಸಿದರು.

ರಾಗಿ ನೋಂದಣಿ ಕೇಂದ್ರಗಳು ತೆರೆಯುವ ಸ್ಥಳ

ನೆಲಮಂಗಲ

1 ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ, ನೆಲಮಂಗಲ ತಾಲೂಕು.

2 ವ್ಯವಸಾಯ ಸೇವಾ ಸಹಕಾರ ಸಂಘ, ಕಲಾಲು ಘಟ್ಟ, ತ್ಯಾಮಗೊಂಡ್ಲು ಹೋಬಳಿ.

3 ವ್ಯವಸಾಯ ಸೇವಾ ಸಹಕಾರ ಸಂಘ, ದಾಬಾಸ್‌ಪೇಟೆ, ಸೋಂಪುರ ಹೋಬಳಿ.

ದೊಡ್ಡಬಳ್ಳಾಪುರ

1 ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್, ದೊಡ್ಡಬಳ್ಳಾಪುರ.

2 ರೈತ ಸಂಪರ್ಕ ಕೇಂದ್ರ, ಸಾಸಲು ಹೋಬಳಿ.

ದೇವನಹಳ್ಳಿ

1 ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರದೊಡ್ಡಿ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ದೇವನಹಳ್ಳಿ.

ಹೊಸಕೋಟೆ

1 ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್, ಮಾಲೂರು ರಸ್ತೆ, ಹೊಸಕೋಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net