ಜಿಲ್ಲೆಯಲ್ಲಿ ಶೇ.98 ರಾಗಿ ಬಿತ್ತನೆ

images (1)
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.98 ಭಾಗ ರಾಗಿ ಬಿತ್ತನೆಯಾಗಿದ್ದು, ಈ ಬಾರಿ ಉತ್ತಮ ಸಲಿನ ನಿರೀಕ್ಷೆ ಇದೆ. ಉತ್ತಮ ಮಳೆಯಿಂದಾಗಿ ಎಲ್ಲ ಕಡೆ ಬಿತ್ತನೆ ಕಾರ್ಯ ಯಶಸ್ವಿಯಾಗಿದೆ. ಸಂಕ್ರಾಂತಿ ವೇಳೆಗೆ ರಾಗಿ ಕಟಾವು ಆರಂಭವಾಗಲಿದ್ದು ಸುಗ್ಗಿ ಸಂಭ್ರಮಕ್ಕೆ ರಾಗಿ ಕಾರಣವಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

ಎಂದಿನಂತೆ ಈ ಬಾರಿ ಮುಂಗಾರು ಜಿಲ್ಲೆಯಲ್ಲಿ ತಡವಾಗಿ ಆರಂಭವಾಗಿದ್ದು ಆಗಸ್ಟ್‌ನಲ್ಲಿ ಉತ್ತಮ ಮಳೆಯಿಂದಾಗಿ ರಾಗಿ ಬಿತ್ತನೆ ಕಾರ್ಯ ಚುರುಕುಗೊಂಡಿತ್ತು. ಬಿತ್ತನೆ ಬಳಿಕ ವಾರಗಟ್ಟಲೆ ಸುರಿದ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ತಡವಾದರೂ ಮಳೆರಾಯ ಬಿಡುವು ನೀಡಿದ್ದರಿಂದ ಬಾಕಿ ಇದ್ದ ಕಡೆಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ 33 ಮಿ.ಮೀ ಮಳೆಯಾಗುತ್ತದೆ ಆದರೆ ಈ ಬಾರಿ 106 ಮಿ.ಮೀ ಮಳೆಯಾಗಿದ್ದು ರಾಗಿ ಬಿತ್ತನೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿತ್ತು. ಜೂನ್ ಹಾಗೂ ಜುಲೈನಲ್ಲಿ ವಾಡಿಕೆ ಮಳೆಗಿಂತ 33 ಮಿ.ಮೀ ಮಳೆ ಕೊರತೆಯಾದರೂ ಆಗಸ್ಟ್‌ನಲ್ಲಿ ಮಳೆರಾಯ ಕೈ ಹಿಡಿದಿದ್ದರಿಂದ ಮಳೆಯಾಶ್ರಿತ ಬೆಳೆಗಳಾದ ರಾಗಿ, ಜೋಳ ಮತ್ತಿತರ ಬೆಳೆಗಳ ಬಿತ್ತನೆ ಚುರುಕುಗೊಂಡಿತ್ತು. ಭೂಮಿಯಲ್ಲಿ ಉತ್ತಮ ತೇವಾಂಶದಿಂದ ಉಳುಮೆಗೆ ಅನುಕೂಲಕರ ವಾತಾವರಣವಿತ್ತು.

ಬಿತ್ತನೆಯಲ್ಲಿ ಏರುಪೇರು: ಜುಲೈನಲ್ಲಿ ನಿರೀಕ್ಷಿತ ಮಳೆಯಾಗಲಿಲ್ಲ, ಆದ್ದರಿಂದ ಹಲವು ಭಾಗಗಳಲ್ಲಿ ರಾಗಿ ಬಿತ್ತನೆ ಕಾರ್ಯವನ್ನು ಮುಂದೂಡಲಾಗಿತ್ತು. ಆಗಸ್ಟ್‌ನಲ್ಲಿ ವಾರಗಟ್ಟಲೆ ಸುರಿದ ಮಳೆಯಿಂದಾಗಿಯೂ ಬಿತ್ತನೆ ಕಾರ್ಯ ತಡವಾಯಿತು. ರಾಗಿ ಬಿತ್ತನೆಗೆ ಭೂಮಿ ಹದಮಾಡಲು ತೊಡಕಾಗಿತ್ತು. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಳೆಯಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯದಲ್ಲೂ ಏರುಪೇರಾಗಿದೆ. ಆದ್ದರಿಂದ ಈ ಬಾರಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಲಿನಲ್ಲಿ ಏರಿಳಿತ ಕಂಡುಬರಲಿದೆ ಎನ್ನಲಾಗಿದೆ.

ನೆಲಮಂಗಲ ತಾಲೂಕು ಮುಂದು: ಈ ಬಾರಿ ಜಿಲ್ಲೆಯಲ್ಲಿ ನೆಲಮಂಗಲ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 14.852 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ನಡೆದಿದೆ. ಆದರೆ ಹೊಸಕೋಟೆ ಭಾಗದಲ್ಲಿ ಅತೀ ಕಡಿಮೆ ಅಂದರೆ 8.540 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ದೊಡ್ಡಬಳ್ಳಾುರ ಭಾಗದಲ್ಲಿ 4.330 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮುಸುಕಿನ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.

ತಾಲೂಕುವಾರು ಬಿತ್ತನೆ ವಿವರ: ನೆಲಮಂಗಲ ತಾಲೂಕಿನಲ್ಲಿ 14.853 ಹೆಕ್ಟೇರ್, ದೊಡ್ಡಬಳ್ಳಾಪುರ 9.820 ಹೆಕ್ಟೇರ್, ಹೊಸಕೋಟೆ 8.546 ಹಾಗೂ ದೇವನಹಳ್ಳಿ ಭಾಗದಲ್ಲಿ 10.508 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

--

ರಿಯಾಯಿತಿ ದರದಲ್ಲಿ ಬಹು ಬೆಳೆ ಒಕ್ಕಣೆ ಯಂತ್ರ :

ಪ್ರತಿ ಬಾರಿ ರಾಗಿ ಒಕ್ಕಣೆ ಸಂದರ್ಭದಲ್ಲಿ ರೈತಾಪಿ ಜನರು ಪರದಾಡುವ ಸನ್ನಿವೇಶಗಳು ಕಂಡುಬರುತ್ತವೆ, ಖಾಸಗಿ ರಾಗಿ ಕಟಾವು ಯಂತ್ರದ ಮಾಲೀಕರು ಜಿಲ್ಲಾಡಳಿತ ನಿಗಧಿಪಡಿಸಿದ್ದಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಬಹು ಬೆಳೆ ಒಕ್ಕಣೆ ಯಂತ್ರಗಳನ್ನು ಪರಿಚಯಿಸಿದೆ. ರೈತಾಪಿ ಜನರಿಗೆ ಇಲಾಖೆ ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ವಿತರಿಸಲಿದ್ದರು ಆಸಕ್ತರು ಕೃಷಿ ಇಲಾಖೆ ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆ ನಾಲ್ಕೂ ತಾಲೂಕುಗಳಲ್ಲಿ ಯಶಸ್ವಿಯಾಗಿ ರಾಗಿ ಬಿತ್ತನೆ ಕಾರ್ಯ ನಡೆದಿದೆ. ಇಲಾಖೆ ಸರ್ವೆಯಂತೆ ಈಗಾಗಲೇ ಶೇ.98 ರಾಗಿ ಬಿತ್ತನೆಯಾಗಿದೆ. ಪ್ರಸ್ತುತ ಮಳೆ ಬಿಡುವು ನೀಡಿದರೆ ಉತ್ತಮ ಸಲು ಬರುವ ನಿರೀಕ್ಷೆ ಇದೆ. ಈಗಾಗಲೇ ರೈತರಿಗೆ ಬಿತ್ತನೆ ಮತ್ತಿತರ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಕೃಷಿ ಇಲಾಖೆಯಂದ ಯಂತ್ರೋಪಕರಣಗಳು ಸಿಗಲಿವೆ ಹೆಚ್ಚಿನ ಮಾಹಿತಿಗೆ ಇಲಾಖೆಯನ್ನು ಸಂಪರ್ಕಿಸಬಹುದು.

ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net