

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕನಿಷ್ಟ ಬೆಂಬಲ ಯೋಜನೆಯಡಿ ರಾಜ್ಯ ಸರ್ಕಾರ ರಾಗಿ ಖರೀದಿಗೆ ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಿತ್ತು. ಅದರಂತೆ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿ ಜು.30ಕ್ಕೆ ಪೂರ್ಣಗೊಂಡಿದ್ದು ಜಿಲ್ಲೆಯ ರಾಗಿ ಬೆಳೆಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ರಾಗಿ ಪ್ರಧಾನ ಬೆಳೆಯಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹೆಚ್ಚು ರೈತರು ಈ ಯೋಜನೆ ಸದ್ಭಳಕೆ ಮಾಡಿಕೊಂಡಿದ್ದು ಕನಿಷ್ಟ ಬೆಂಬಲ ಯೋಜನೆಯಡಿ ನೋಂದಾಯಿತ ರೈತರಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ 3,43,389 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ರಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಖರೀದಿಸಿದ ರಾಗಿ ಒಂದು ಕಡೆಯ ಗೋದಾಮಿನಲ್ಲಿ ಶೇಕರಿಸಲಾಗಿದೆ, ಹೊಸಕೋಟೆ ಹಾಗೂ ದೇವನಹಳ್ಳಿ ಭಾಗದ ರಾಗಿ ಪ್ರತ್ಯೇಕ ಗೋದಾಮಿನಲ್ಲಿ ಶೇಕರಿಸಿದ್ದು, ಈಗಾಗಲೇ ಗೋದಾಮುಗಳಿಂದ ರಾಗಿ ರವಾನೆ ಪ್ರಕ್ರಿಯೆ ಆರಂಭವಾಗಿದೆ. ಜೂನ್ ತಿಂಗಳಲ್ಲಿ ಪಡಿತರ ಜತೆಗೆ 2 ಕೆಜಿ ರಾಗಿ ವಿತರಣೆ ಆರಂಭವಾಗಿತ್ತು ಜುಲೈ 1 ರಿಂದಲೇ 3 ಕೆಜಿ ರಾಗಿ ಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
25586 ರೈತರು ನೋಂದಣಿ: ರಾಗಿ ಖರೀದಿ ಪ್ರಕ್ರಿಯೆಗೆ ಜಿಲ್ಲೆಯ 25586 ರೈತರು ನೋಂದಣಿ ಮಾಡಿಕೊಂಡಿದ್ದರು ಈ ಪೈಕಿ 23943 ರೈತರು ರಾಗಿ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ್ದರು. ಉಳಿದವರು ಖಾಸಗಿಯಾಗಿ ಮಾರಾಟ ಮಾಡಿದ್ದಾರೆ ಮತ್ತೆ ಕೆಲವರು ಮನೆ ಬಳಕೆಗೆ ಸೇರಿ ಇನ್ನಿತರ ಕಾರಣಕ್ಕೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
361544 ಕ್ವಿಂಟಾಲ್ ರಾಗಿ ಸಂಗ್ರಹದ ಗುರಿ ಹೊಂದಲಾಗಿತ್ತು ಇದರಲ್ಲಿ 3,43,389 ಕ್ವಿಂಟಾಲ್ ಖರೀದಿಯಾಗಿದ್ದು 147.31 ಕೋಟಿ ರೂಪಾಯಿ ಮೌಲ್ಯದ ರಾಗಿ ಖರೀದಿಸಿದಂತಾಗಿದೆ. ಇಲಾಖೆಯ ಅಂದಾಜಿನ ಪ್ರಕಾರ ಇದುವರೆಗೆ ನೋಂದಾಯಿತ ರೈತರಿಂದ ಶೇ.98 ರಾಗಿ ಖರೀದಿಯಾಗಿದೆ ಎನ್ನಲಾಗಿದೆ.
ಗುಣಮಟ್ಟದ ಕೆಂಪುರಾಗಿ: ರಾಗಿ ಖರೀದಿ ಕೇಂದ್ರಗಳ ಎಲ್ಲೆಡೆ ಹಲವು ಹಂತಗಳಲ್ಲಿ ಪರೀಕ್ಷೆಗೊಳಪಟ್ಟು ರಾಗಿ ಖರೀದಿಸಲಾಗಿದೆ, ಗುಣಮಟ್ಟದ ಕೆಂಪುರಾಗಿ ದಾಸ್ತಾನು ಮಾಡಲಾಗಿದೆ. ದೊಡ್ಡಬಳ್ಳಾಪುರದ ಗುಂಡಮಗೆರೆ ಹಾಗೂ ವಿಜಯಪುರದ ವೇರ್‌ಹೌಸ್‌ಗಳಿಗೆ ರಾಗಿ ರವಾನಿಯಾಗಿದ್ದು, ರಾಗಿ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾ.1ರಿಂದ ಜು.30: ಮಾ.1 ರಿಂದ ಜಿಲ್ಲೆಯಲ್ಲಿ ವಿದ್ಯುಕ್ತವಾಗಿ ರಾಗಿ ಖರೀದಿಗೆ ಚಾಲನೆ ನೀಡಲಾಯಿತು. ಕಳೆದೆರಡು ಸಾಲಿಗಿಂತ ಈ ಬಾರಿ ರೈತರಿಂದ ಸರಳವಾಗಿ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಿ ಯಶಸ್ವಿಯೂ ಆಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದ ಲವಾಗಿ ಈ ಬಾರಿ ಹೆಚ್ಚಿನ ರೈತರು ರಾಗಿ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಾ.3ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು ಜೂ.30 ಖರೀದಿ ಖರೀದಿ ಪ್ರಕ್ರಿಯೆ ಕೊನೆಗೊಳಿಸಲಾಗಿದೆ. ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 25585 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 23943 ರೈತರು ರಾಗಿ ಮಾರಾಟ ಮಾಡಿದ್ದಾರೆ 3,43,389 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ಗೋದಾಮುಗಳಲ್ಲಿ ದಾಸ್ತಾನು ಮಾಡಿರುವ ರಾಗಿಯನ್ನು ಸರ್ಕಾರದ ವೇರ್‌ಹೌಸ್‌ಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೆ ಪಡಿತರ ಅಂಗಡಿಗಳ ಮೂಲಕ ರಾಗಿ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ
ಶಂಕರ್‌ಮೂರ್ತಿ, ಉಪನಿರ್ದೇಶಕ ಆಹಾರ ಇಲಾಖೆ ಬೆಂ.ಗ್ರಾಮಾಂತರ
ಏ.1ರಿಂದ ವಿಮೆ ನೋಂದಣಿಗೆ ಅವಕಾಶ ನೀಡಲಾಗಿದ್ದು, ರಾಗಿ ಬೆಳೆ ನೋಂದಣಿಗೆ ಆ.16 ಕೊನೆ ದಿನವಾಗಿದೆ. ಬೆಳೆ ವಿಮೆ ನೋಂದಣಿ ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ರಕ್ಷಣೆ ನೀಡುತ್ತದೆ, ಈ ಬಗ್ಗೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ವ್ಯಾಪಾರ ಪ್ರಚಾರ ಮಾಡಲಾಗುತ್ತಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತರ ಸಂಪರ್ಕ ಕೇಂದ್ರ ಮತ್ತು ತಾಲೂಕು ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.
ಗಾಯತ್ರಿ, ಉಪನಿರ್ದೇಶಕ ಕೃಷಿ ಇಲಾಖೆ ಬೆಂ.ಗ್ರಾಮಾಂತರ