ಮಳೆಯಾಶ್ರಿತ ರಾಗಿಗೆ ವಿಮೆ ರಕ್ಷಣೆ

images
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬಹುಪಾಲು ಮಳೆಯಾಶ್ರಿತ ಬೆಳೆಯಾಗಿರುವುದರಿಂದ ಪ್ರಕೃತಿ ವಿಕೋಪದ ಕಾರಣ ನಷ್ಟ ಎದುರಿಸುವ ರೈತರಿಗೆ ರಕ್ಷಣೆ ನೀಡಲು ಸಲ್ ಬಿಮಾ ಯೋಜನೆ ನೋಂದಣಿಗೆ ಮುಂದಾಗುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

2025-26 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನಿನಲ್ಲಿ ಪ್ರಧಾನಮಂತ್ರಿ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳ್ಳಿಸಲು ಮಂಜೂರಾತಿ ನೀಡಿದ್ದು, ರಾಜ್ಯದಲ್ಲಿ ಈ ಯೋಜನೆಯನ್ನು ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ(ವಿಮಾ) ಯೋಜನೆ ಎಂದು ಅನುಷ್ಠಾನಗೊಳಿಸಲಾಗುತ್ತಿದೆ. ಅದರಂತೆ 2025ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಸೂಚಿತ ಬೆಳೆಗಳಲ್ಲಿ (ರಾಗಿ ಮಳೆಯಾಶ್ರಿತ) ಬೆಳೆಗೆ ಮಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

76 ಸಾವಿರ ಹೆಕ್ಟೇರ್: ಯಾವುದೇ ನದಿಮೂಲವಿಲ್ಲದ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿ ಗುರುತಿಸಿಕೊಂಡಿದೆ ಅದರಲ್ಲೂ ಮಳೆಯಾಶ್ರಿತ ಬೆಳೆಯೇ ಹೆಚ್ಚಾಗಿದ್ದು, ಪ್ರತಿ ವರ್ಷ ಅತೀವೃಷ್ಟಿ ಅನಾವೃಷ್ಟಿಗಳಿಂದ ಬೆಳೆಗಾರರು ನಷ್ಟ ಎದುರಿಸುವುದು ಸಾಮಾನ್ಯವಾಗಿದೆ. ಅನೇಕ ವೇಳೆ ಮಾಹಿತಿ ಕೊರತೆಯಿಂದಾಗಿ ವಿಮೆ ನೋಂದಣಿ ಮಾಡಿಸಿಕೊಳ್ಳದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ವಿಮೆ ನೋಂದಣಿ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡುತ್ತಿದೆ.

ಏನೇನು ಬೇಕು? ಬೆಳೆ ವಿಮೆ ನೊಂದಣಿಗೆ ರೈತರು ಪೂಟ್ಸ್ ಗುರುತಿನ ಸಂಖ್ಯೆ ಕಡ್ಡಾಯವಾಗಿ ನೀಡಬೇಕು, ರೈತರು ವಿಮಾ ಕಂತಿನ ಹಣವನ್ನು ಪ್ರಸ್ತಾವನೆಯೊಂದಿಗೆ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಲ್ಲಿಸಬೇಕು, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಕಂತನ್ನು ಪಾವತಿಸಿ ವಿಮೆಗೆ ನೊಂದಾಯಿಸಿಕೊಳ್ಳಬಹುದು ಎಂದು ಗ್ರಾಮಾಂತರ ಜಿಲ್ಲೆ ಕೃಷಿ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.

ಯಾವ ಸಂದರ್ಭದಲ್ಲಿ ಪರಿಹಾರ? ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ಅಥವಾ ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸಲಿದೆ, ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ, ಶುಷ್ಕ ಪರಿಸ್ಥತಿ ನೆರೆ, ಪ್ರವಾಹಗಳಿಂದ ಬೆಳೆ ಮುಳುಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರವಾಗಿ ವಿಮಾ ಭದ್ರತೆ ಒದಗಿಸುವುದು ಇದರ ಉದ್ದೇಶವಾಗಿದೆ, ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಾಗ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರ ಸಿಗಲಿದೆ, ಅನಿರೀಕ್ಷಿತ ಸಂದರ್ಭ ಹಾಗೂ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಿರಲು ವಿಮೆ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಆ.16 ಕಡೇ ದಿನ: ಏ.1ರಿಂದ ಬೆಳೆ ವಿಮೆ ನೋಂದಣಿಗೆ ಅವಕಾಶ ನೀಡಲಾಗಿದ್ದು, ರಾಗಿ ಬೆಳೆ ನೋಂದಣಿಗೆ ಆ.16 ಕೊನೆ ದಿನವಾಗಿದೆ. ಇದರೊಂದಿಗೆ ಮುಸುಕಿನ ಜೋಳ, ಹುರುಳಿ ಬೆಳೆಗಾರರು ನೋಂದಾಯಿಸಿಕೊಳ್ಳಬಹುದು. ನೆಲಗಡಲೆ ಬೆಳೆಗಾರರು ಜು.30ರೊಳಗೆ ನೋಂದಾಯಿಸಿಕೊಳ್ಳಬೇಕು, ತೊಗರಿ, ಟೊಮ್ಯಾಟೋ ಬೆಳೆಗಾರರಿಗೆ ಜು.15 ಕಡೇ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ವಿಮೆ ನೋಂದಣಿ ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ರಕ್ಷಣೆ ನೀಡುತ್ತದೆ, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲ ರೈತರು ವಿಮೆ ನೋಂದಣಿ ಮಾಡಿಸಿಕೊಳ್ಳುವುದು ಒಳಿತು, ಈ ಬಗ್ಗೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ವ್ಯಾಪಾರ ಪ್ರಚಾರ ಮಾಡಲಾಗುತ್ತಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತರ ಸಂಪರ್ಕ ಕೇಂದ್ರ ಮತ್ತು ತಾಲೂಕು ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.

ಗಾಯತ್ರಿ, ಉಪನಿರ್ದೇಶಕ ಕೃಷಿ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net