

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ಚಟುವಟಿಕೆ ಮಳೆಯೊಂದಿಗೆ ಆಡುವ ಜೂಜಾಟ ಎಂಬಂತೆ ಈ ಬಾರಿಯೂ ಜಿಲ್ಲೆಯ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನ. 30 ರಿಂದ ಡಿ. 3 ರವರೆಗೆ 5 ಮಿ.ಮೀ ಸಾಧಾರಣ ಮಳೆಯಾಗುವ ಸಾಧ್ಯತೆ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿರುವುದರಿಂದ ಕಟಾವಿಗೆ ಬಂದ ರಾಗಿ ರಕ್ಷಣೆ ಬೆಳೆಗಾರರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
69,230 ಹೆಕ್ಟೇರ್ ರಾಗಿ: ನಾಲ್ಕೂ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಈ ಬಾರಿ 69,230 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ನವೆಂಬರ್ ಮೂರನೇ ವಾರದಿಂದಲೇ ರಾಗಿ ಕಟಾವು ಪ್ರಕ್ರಿಯೆ ಶುರುವಾಗಿದ್ದು, ಜಿಲ್ಲಾದ್ಯಂತ ರಾಗಿ ಕಟಾವು ಕಾರ್ಯ ನಡೆಯುತ್ತಿದೆ. ಕಟಾವಿನ ವೇಳೆ ದಿಢೀರ್ ಮಳೆ ಸುರಿದರೆ ಕಟಾವು ಮಾಡಿದ ರಾಗಿ ಬೆಳೆಯನ್ನು ಸಂರಕ್ಷಣೆ ಮಾಡುವುದು ಕಷ್ಟಸಾಧ್ಯ ಎಂಬಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
ಟಾರ್ಪಾಲಿನ್ ಮೊರೆ:
ಮುನ್ನೆಚ್ಚರಿಕಾ ಕ್ರಮವಾಗಿ ರೈತರು ಕಟಾವು ಮಾಡಿದ ರಾಗಿ ಬೆಳೆಯನ್ನು ಮಳೆಯಲ್ಲಿ ನೆನೆಯದಂತೆ ಟಾರ್ಪಲಿನ್ ಹೊದಿಕೆಯಿಂದ ಸಂರಕ್ಷಿಸಿಕೊಳ್ಳಬೇಕು ಹಾಗೂ ಒಂದು ವೇಳೆ ರಾಗಿ ಬೆಳೆ ಕಟಾವು ಮಾಡದೇ ಇದ್ದರೆ ಈ ದಿನಗಳಲ್ಲಿ ಕೊಯ್ಲು ಮಾಡುವುದನ್ನು ಮುಂದೂಡಬೇಕು ಮಳೆ ಪ್ರಮಾಣ ಕಡಿಮೆಯಾದ ಮೇಲೆ ರಾಗಿ ಕಟಾವು ಶುರುಮಾಡಬೇಕು ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಗಿ ಬೆಳೆ ಕಟಾವು ಮಾಡಿರುವ ರೈತರು ರಾಗಿ ಮೆದೆಯನ್ನು ರ್ಟಾಾಲಿನ್ ಮೂಲಕ ರಕ್ಷಣೆ ಮಾಡುವ ಕಸರತ್ತು ಆರಂಭಿಸಿದ್ದು ರ್ಟಾಾಲಿನ್ ಮೊರೆ ಹೋಗಿದ್ದಾರೆ.ಈ ಬಾರಿ ಜಿಲ್ಲೆಯಲ್ಲಿ ಜುಲೈ ಮಧ್ಯಂತರದ ಬಳಿಕ ಬಿತ್ತನೆ ಕಾರ್ಯ ಆರಂಭವಾಗಿತ್ತು, ಆಗಸ್ಟ್ ಅಂತ್ಯದೊಳಗೆ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಇದರಲ್ಲಿ ಜಿಲ್ಲೆಯ ಪ್ರಮುಖ ಬೆಳೆ ರಾಗಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ನಂತರದಲ್ಲಿ ಮುಸುಕಿನ ಜೋಳ, ತೊಗರಿ ಹಾಗೂ ನೆಲಗಡಲೆ ಬಿತ್ತನೆಯಾಗಿತ್ತು.
ಬಾಡಿಗೆ ದರ ನಿಗಧಿ:ಜಿಲ್ಲೆಯಲ್ಲಿ ಬಹುತೇಕ ರಾಗಿ ಬೆಳೆ ಕಟಾವು ಹಂತದಲ್ಲಿದ್ದು ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವು ಕೈಗೊಳ್ಳುತ್ತಿದ್ದಾರೆ. ಆದರೆ ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ 3500 ರೂಗಳಿಂದ 4 ಸಾವಿರ ರೂಗಳ ವರೆಗೆ ಬಾಡಿಗೆ ಹಣ ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರಿಂದ ದೂರು ಬಂದಿರುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ ಎಂಬ ದೃಷ್ಟಿಯಲ್ಲಿ ಪ್ರತಿ ಗಂಟೆಗೆ ನ್ಯೂ ಹಾಲೆಂಡ್ ಜಾನ್ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ಗಂಟೆಗೆ 3350 ರೂ. ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಗಂಟೆಗೆ 2,700 ರೂ. ಮೀರದಂತೆ ಜಿಲ್ಲಾಡಳಿತದ ಬಾಡಿಗೆ ನಿಗದಿಪಡಿಸಿದೆ. ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ರಾಗಿಗೆ ಬೆಂಬಲ ಬೆಲೆ: ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ರಾಗಿ ಖರೀದಿಸಲು ಡಿ.1 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಪಾಯಿಗಳು ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆಗೆ ನಿಗದಿತ ಸ್ಥಳಗಳನ್ನು ಗುರುತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ತೆರೆಯುವ ಸ್ಥಳಗಳು
*ನೆಲಮಂಗಲ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ
*ದೊಡ್ಡಬಳ್ಳಾಪುರ: ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್
* ದೇವನಹಳ್ಳಿ: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ, ಚಿಕ್ಕಬಳ್ಳಾಪುರ ರಸ್ತೆ
* ಹೊಸಕೋಟೆ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್‌ಮಿಲ್ ಕಾಂಪೌಂಡ್, ಮಾಲೂರು ರಸ್ತೆ.