

ಮೂಡಿಗೆರೆ: ಮುದ್ರೆಮನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದು, ತಂದೆ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು ಕೋಣನಕುಂಟೆ ನಿವಾಸಿಗಳಾದ ಪೂಜಾ ಹಿರೇಮಠ್(42), ಪುತ್ರ ನಿರಂಜನ ಹಿರೇಮಠ್(18) ಮೃತ ದುರ್ದೈವಿಗಳು. ಕಾರು ಚಲಾಯಿಸುತ್ತಿದ್ದ ಶಿವಯೋಗಯ್ಯ ಹಿರೇಮಠ್(49) ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶನಿವಾರ ಸಕಲೇಶಪುರದಿಂದ ಮೂಡಿಗೆರೆ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಕುಟುಂಬದವರು ಕಾರ್ಕಳದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ಪುತ್ರನನ್ನು ನೋಡಲು ಹೋಗಿ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಶಿವಯೋಗಯ್ಯ ಅವರು ಬೆಂಗಳೂರಿನ ರಿಲಯನ್ಸ್ ಕಂಪನಿಯ ಉದ್ಯೋಗಿ ಎಂಬ ಮಾಹಿತಿ ಲಭಿಸಿದೆ. ಹೆದ್ದಾರಿ ಕಿರಿದಾಗಿದ್ದು, ಬಸ್‌ಗೆ ಜಾಗ ಬಿಡಲೂ ಆಗದೆ ರಸ್ತೆಯಿಂದ ಕಾರನ್ನೂ ಕೆಳಗೆ ಇಳಿಸಲೂ ಆಗದೆ ಅಪಘಾತ ಸಂಭವಿಸಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.